Breaking News

ಐಟಿ ವೆಬ್‌ಸೈಟ್‌ಗೆ ಕನ್ನ ಹಾಕಿ ಭಾರೀ ವಂಚನೆ

Spread the love

ಬೆಂಗಳೂರು: ಆದಾಯ ತೆರಿಗೆ ಇಲಾಖೆಯ(ಐಟಿ) ವೆಬ್‌ಸೈಟ್‌ ಹ್ಯಾಕ್‌ ಮಾಡಿಕೊಂಡು ತೆರಿಗೆದಾರರ ಆದಾಯ ತೆರಿಗೆ ಮರುಪಾವತಿಯನ್ನು ನಕಲಿ ಖಾತೆ ತೆರೆದು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಆರೋಪಿಯನ್ನು ಸಿಐಡಿ ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

 

ಹಾಸನ ಜಿಲ್ಲೆ ಹಿರಿಸಾವೆ ಮೂಲದ ದಿಲೀಪ್‌ ರಾಜೇಗೌಡ (32) ಬಂಧಿತ ಆರೋಪಿ. ಈತನ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ, ಗೋವಾ, ತೆಲಂಗಾಣದಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಧಾರವಾಡದಲ್ಲಿ ಬಂಧಿಸಲಾಗಿದೆ. ಈತನಿಂದ ಕೆಲ ಡಿಜಿಟಲ್‌ ಹಾಗೂ ಇತರೆ ಸಾಕ್ಷ್ಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಐಡಿ ಪೊಲೀಸರು ಹೇಳಿದರು.

ದಿಲೀಪ್‌ ರಾಜೇಗೌಡ ಮೆಕಾನಿಕಲ್‌ ಎಂಜಿನಿಯರ್‌ ಆಗಿದ್ದು, ಈ ಹಿಂದೆ ಬ್ಯಾಂಕ್‌ ಗಳಲ್ಲಿ ಸಾಲ ಕೊಡಿಸುವ ಕೆಲಸ ಮಾಡುತ್ತಿದ್ದ. ಈ ವೇಳೆ ಸರ್ಕಾರಿ ವೆಬ್‌ಸೈಟ್‌ ಅಥವಾ ಪೋರ್ಟಲ್‌ಗ‌ಳನ್ನು ಹ್ಯಾಕ್‌ ಮಾಡಿ ಅವುಗಳಲ್ಲಿರುವ ದತ್ತಾಂಶ ಮತ್ತು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದ. ಬಳಿಕ ಅದನ್ನು ದುರುಪಯೋಗ ಪಡಿಸಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ. ಹೀಗೆ, ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್‌ ಪೋರ್ಟಲ್‌ ಹ್ಯಾಕ್‌ ಮಾಡಿದ್ದು, ಅಸಲು ತೆರಿಗೆದಾರರ ಸಂಬಂಧಿಕರ ಪ್ಯಾನ್‌ ಖಾತೆಗಳ ಮಾಹಿತಿ ಕಳವು ಮಾಡುತ್ತಿದ್ದ. ಬಳಿಕ ಅವರ ಆದಾಯ ತೆರಿಗೆ ಮರುಪಾವತಿ ವಿವರಗಳನ್ನು ಮಾರ್ಪಡಿಸಿ ವಂಚಿಸುತ್ತಿದ್ದ. ಅಲ್ಲದೆ, ನಕಲಿ ಕೆವೈಸಿ ದಾಖಲಾತಿಗಳ ಮೂಲಕ ಅಸಲು ತೆರಿಗೆದಾರರ ಹೆಸರಿನಲ್ಲಿ ನಕಲಿ ಬ್ಯಾಂಕ್‌ ಖಾತೆಗಳನ್ನು ತೆರೆದು ಆದಾಯ ತೆರಿಗೆಯಿಂದ ಬರುತ್ತಿದ್ದ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದ. ಇತ್ತೀಚೆಗೆ ಸಾರ್ವಜನಿಕರೊಬ್ಬರಿಗೆ 1.41 ಕೋಟಿ ರೂ. ವಂಚಿಸಿದ್ದ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಿಐಡಿ ಪೊಲೀಸರು ಮಾಹಿತಿ ನೀಡಿದರು.

ತನಿಖೆ ವೇಳೆ ಆರೋಪಿ ಇದೇ ರೀತಿ 6 ಪ್ರಕರಣಗಳಲ್ಲಿ 3.6 ಕೋಟಿ ರೂ. ವಂಚಿಸಿದ್ದು, ಈ ಹಿಂದೆ ಬ್ಯಾಂಕ್‌ಗಳಲ್ಲಿ ಸಾಲ ಕೊಡಿಸುವ ಕೆಲಸ ಮಾಡುತ್ತಿದ್ದರಿಂದ, ಕೆಲ ನಕಲಿ ದಾಖಲೆಗಳನ್ನು ಸಲ್ಲಿಸಿ ಹಲವಾರು ಬ್ಯಾಂಕ್‌ಗಳಲ್ಲಿ ವಾಹನ ಸಾಲ ಪಡೆದು ವಂಚಿಸುತ್ತಿದ್ದ. ಆ ಬಳಿಕ ವೆಬ್‌ ಸೈಟ್‌ ಅಥವಾ ಪೋರ್ಟಲ್‌ ಬಳಕೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್‌ ಪೋರ್ಟಲ್‌ ಹ್ಯಾಕ್‌ ಮಾಡಿದ್ದಾನೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ವೆಬ್‌ಸೈಟ್‌ ಸರಿಪಡಿಸುವಂತೆ ಕೋರಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಸಿಐಡಿ ಡಿಜಿಪಿ ಕೆ.ವಿ.ಶರತ್‌ ಚಂದ್ರ, ಸಿಐಡಿ ಸೈಬರ್‌ ವಿಭಾಗದ ಎಸ್ಪಿ ಎಂ.ಡಿ.ಶರತ್‌ ನೇತೃತ್ವದಲ್ಲಿ ಡಿಟೆಕ್ಟಿವ್‌ ಇನ್‌ ಸ್ಪೆಕ್ಟರ್‌ ಶಿವಪ್ರಸಾದ್‌, ಆರ್‌.ರಾಜೇಶ್‌, ಟಿ.ಎನ್‌.ಚಂದ್ರಹಾಸ್‌ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆದಿದೆ.

ಕಾವೇರಿ ಆನ್‌ಲೈನ್‌ ಪೋರ್ಟಲ್‌ಗ‌ೂ ಕನ್ನ: ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ ಮಾತ್ರವಲ್ಲದೆ, ರಾಜ್ಯ ಸರ್ಕಾರದ ಅಧೀನದಲ್ಲಿರುವ ಆಸ್ತಿ ನೋಂದಣಿ ವಿವರಗಳನ್ನೊಳಗೊಂಡ ಕಾವೇರಿ ಆನ್‌ ಲೈನ್‌ ಪೋರ್ಟಲ್‌ ಅನ್ನು ಕೂಡ ಆರೋಪಿ ದುರುಪಯೋಗ ಪಡಿಸಿಕೊಂಡಿದ್ದು, ಈ ಹಿಂದೆಯೂ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಾವೇರಿ ವೆಬ್‌ಸೈಟ್‌ ದುರುಪಯೋಗ ಪಡಿಸಿಕೊಂಡು ನಕಲಿ ದಾಖಲೆಗಳನ್ನು ಸಲ್ಲಿಸಿ ಆಸ್ತಿ ನೋಂದಣಿ ಮಾಡಿಸುತ್ತಿದ್ದ. ಅಂತಹ ದಾಖಲೆಗಳನ್ನು ರಿಯಲ್‌ ಎಸ್ಟೇಟ್‌ ಹಾಗೂ ಭೂಕಬಳಿಕೆದಾರರಿಗೆ ಮಾರಾಟ ಮಾಡುತ್ತಿದ್ದ ಎಂದು ಸಿಐಡಿ ಮೂಲಗಳು ತಿಳಿಸಿವೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ