ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ತ್ಯಾಜ್ಯ ತುಂಬಿದ ಚರಂಡಿಯಲ್ಲಿ ಪೆಟ್ರೋಲ್-ಡೀಸೆಲ್ ತುಂಬಿದ್ದ ಟ್ಯಾಂಕರ್ ಸಿಲುಕಿದ ಘಟನೆ ಭಾನುವಾರ ನಡೆದಿದೆ.
ವಾಹನ ನಿಲ್ಲಿಸಲು ಚಾಲಕ ರಸ್ತೆ ಪಕ್ಕ ವಾಹನ ತೆಗೆದುಕೊಳ್ಳುತ್ತಿದ್ದಂತೆ ಟ್ಯಾಂಕರ್ ಎಡಭಾಗದ ಎಲ್ಲ ಚಕ್ರಗಳು ಚರಂಡಿಯಲ್ಲಿ ಕುಸಿದಿವೆ.
ಟ್ಯಾಂಕರ್ ವಾಲಿಕೊಂಡು ನಿಂತಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಸಂಜೆ ಎರಡು ಕ್ರೇನ್ ಗಳ ಮೂಲಕ ತೈಲ ತುಂಬಿದ್ದ ಟ್ಯಾಂಕರ್ ಮೇಲೆತ್ತಲಾಗಿದೆ.
ಹೆದ್ದಾರಿ ನಿರ್ವಹಣಾ ಕಂಪನಿ ವರ್ಷಗಳಿಂದ ಚರಂಡಿ ಸ್ವಚ್ಛಗೊಳಿಸಿಲ್ಲ. ಸ್ಥಳೀಯ ಪಟ್ಟಣ ಪಂಚಾಯ್ತಿ ಕಸ ಸಂಗ್ರಹಕ್ಕೆ ತೊಟ್ಟಿ ಇಟ್ಟಿಲ್ಲ. ಹೀಗಾಗಿ ಹೆದ್ದಾರಿ ಪಕ್ಕದ ವೈನ್ ಶಾಪ್, ದಾಬಾ, ಹೊಟೇಲ್ ಸೇರಿ ಇತರ ಅಂಗಡಿಗಳ ವ್ಯಾಪಾರಿಗಳು ತಮ್ಮಲ್ಲಿ ಸಂಗ್ರಹವಾಗುವ ತ್ಯಾಜ್ಯ ವಸ್ತುಗಳನ್ನು ನೇರವಾಗಿ ಚರಂಡಿಗೆ ಎಸೆಯುತ್ತಿದ್ದಾರೆ. ಹೀಗಾಗಿ ಚರಂಡಿ ಸಂಪೂರ್ಣ ಹೂತುಕೊಳ್ಳುತ್ತಿದ್ದು, ಮಳೆನೀರು ಸಹ ಸಾಗಲಾಗದೇ ವಾಹನ ಸಿಲುಕಿಕೊಳ್ಳುವಂತಾಗಿದೆ.
ಅಧಿಕಾರಿಗಳ ನಡೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದು, ಚರಂಡಿ ಸ್ವಚ್ಛಚಗೊಳಿಸುವ ಜೊತೆಗೆ ಕಸ ಸಂಗ್ರಹಕ್ಕೆ ತೊಟ್ಟಿ ಇಡುವುದು ಮತ್ತು ಚರಂಡಿಗೆ ತ್ಯಾಜ್ಯ ಎಸೆಯುವುದು ತಡೆಯಲು ಕ್ರಮಕೈಗೊಳಬೇಕೆಂದು ಆಗ್ರಹಿಸಿದ್ದಾರೆ.
14mkh3 ಎಂ.ಕೆ.ಹುಬ್ಬಳ್ಳಿ ಪಟ್ಟಣದ ರಾ.ಹೆ-4ರ ಪಕ್ಕದ ಚರಂಡಿಯಲ್ಲಿ ಸಿಲುಕಿದ ಪೆಟ್ರೋಲ್-ಡೀಸೆಲ್ ತುಂಬಿದ್ದ ಟ್ಯಾಂಕರ್ ಮೇಲೆತ್ತುತ್ತಿರುವ ಕ್ರೇನ್ ಗಳು.