ಯಾದಗಿರಿ: ಇಷ್ಟು ದಿನ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಪಾನಿಪೂರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಉತ್ತರ ಭಾರತದ ವಿವಿಧ ರಾಜ್ಯಗಳ ಕೂಲಿ ಕಾರ್ಮಿಕರು, ಕಾಲ್ನಡಿಗೆ ಮತ್ತು ಬೈಕ್ ಮೂಲಕ ತಮ್ಮ-ತಮ್ಮ ಊರುಗಳಿಗೆ ವಾಪಸ್ಸಾಗುತ್ತಿದ್ದಾರೆ.
ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ತಮ್ಮ ಕುಟುಂಬಗಳೊಂದಿಗೆ ಕೆಲವರು ಮಧ್ಯಪ್ರದೇಶಕ್ಕೆ ನಡೆದುಕೊಂಡು ಹೋಗುತ್ತಿದ್ದರೆ. ಇನ್ನೂ ಕೆಲವರು ಉತ್ತರ ಪ್ರದೇಶಕ್ಕೆ ಬೈಕ್ ಮೇಲೆ ಹೊರಟಿದ್ದಾರೆ. ಕಲಬುರಗಿ, ವಿಜಯಪುರ ಹಾಗೂ ದಾವಣಗೆರೆಯಲ್ಲಿ ಪಾನಿಪೂರಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ 25 ಕ್ಕೂ ಹೆಚ್ಚು ಕಾರ್ಮಿಕರು ಉತ್ತರ ಭಾರತದತ್ತ ನಮ್ಮ ಪ್ರಯಾಣ ಬೆಳೆಸಿದ್ದಾರೆ.
ವಿಶ್ರಾಂತಿಗಾಗಿ ಯಾದಗಿರಿ ನಗರದ ರಸ್ತೆಗಳ ಪಕ್ಕದಲ್ಲಿ ಕಾರ್ಮಿಕರು ಬಿಡಾರ ಹಾಕಿದ್ದಾರೆ. ಈ ಬಗ್ಗೆ ತಿಳಿದು ಸ್ಥಳಕ್ಕೆ ಕಾರ್ಮಿಕ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಕಾರ್ಮಿಕರಿಗೆ ಧೈರ್ಯ ತುಂಬಿ ಬಸ್ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಆದರೆ ಅಧಿಕಾರಿಗಳ ಮಾತಿಗೆ ಬಗ್ಗದ ಕಾರ್ಮಿಕರು, ತಮಗೆ ಯಾರ ಸಹಾಯವೂ ಬೇಡ ನಮ್ಮನ್ನು ಬಿಟ್ಟು ಬಿಡಿ ಎಂದು ಅಳಲು ತೊಡಿಕೊಂಡು ತಮ್ಮ ಪಯಣವನ್ನು ಮುಂದುವರೆಸಿದ್ದಾರೆ.