ಯಾದಗಿರಿ: ಜಿಲ್ಲೆಯಲ್ಲಿ ಸದ್ಯ ಕೊರೊನಾ ರುದ್ರ ತಾಂಡವಾಡುತ್ತಿದೆ. ಮಹಾರಾಷ್ಟ್ರದಿಂದ ಬಂದ ಕಾರ್ಮಿಕರಿಗೆ ಕೋವಿಡ್ ಎಂಬ ಬೇತಾಳ ಬೆನ್ನು ಬಿದ್ದಿದ್ದಾನೆ. ಹೀಗಾಗಿ ಯಾದಗಿರಿಯಲ್ಲಿ ಸೋಂಕಿತರ ಸಂಖ್ಯೆ 300ರ ಸಮೀಪ ಬಂದು ನಿಂತಿದೆ. ಈ 300ರಲ್ಲಿ ವೃದ್ಧರು, ಯುವಕರು, ಗರ್ಭಿಣಿ, ಬಾಣಂತಿಯರು ಹೀಗೇ ಎಲ್ಲಾ ವಯಸ್ಸಿನವರು ಇದ್ದಾರೆ. ಇದರ ಜೊತೆಗೆ ಹಾಲು ಕುಡಿಯುವ ಕಂದಮ್ಮಗಳಿಂದ 10 ವರ್ಷದ ವರೆಗಿನ ಮಕ್ಕಳು ಅತೀ ಹೆಚ್ಚಾಗಿರುವುದು, ಬಹಳಷ್ಟು ನೋವಿನ ಸಂಗತಿ.
ಜಿಲ್ಲೆಯಲ್ಲಿ ಇದುವರೆಗೆ 55ಕ್ಕೂ ಅಧಿಕ ಮಕ್ಕಳು ಕೊರೊನಾ ಪಾಸಿಟಿವ್ ಗೆ ಒಳಗಾಗಿವೆ. ಈ ಎಲ್ಲಾ ಮಕ್ಕಳನ್ನು ಸದ್ಯ ಯಾದಗಿರಿ ನಗರದ ಹೊರ ವಲಯದಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಮಕ್ಕಳು ಈ ಅವಧಿಯಲ್ಲಿ ಬಹಳಷ್ಟು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಯಾಕೆಂದರೆ ಚಿಕಿತ್ಸಾ ಅವಧಿ ದೀರ್ಘವಾಗಿದ್ದು, ಮಕ್ಕಳು ಆಟವಿಲ್ಲದೆ, ಜೊತೆಗಾರಿಲ್ಲದೆ ಕೊರಗುತ್ತಿವೆ.
ಮಕ್ಕಳ ಈ ಪರಿಸ್ಥಿತಿ ಕಂಡ ಕೋವಿಡ್ ವಿಶೇಷ ಸೇವೆ ಸಲ್ಲಿಸುತ್ತಿರುವ ಡಾ.ವಿರೇಶ್ ಜಾಕಾ, ಒಂದು ವಿಭಿನ್ನ ಆಲೋಚನೆಯನ್ನು ಮಾಡಿ ಮಕ್ಕಳ ಮುಖದಲ್ಲಿ ನಗು ತರಸಲು ಮುಂದಾಗಿದ್ದಾರೆ. ಜಾಕಾ ತಮ್ಮ ಮನೆಯಲ್ಲಿರುವ ಆಟಿಕೆಗಳ ಜೊತೆ ಹೊಸ ಗೊಂಬೆಗಳನ್ನು ಖರೀದಿಸಿ ಆಸ್ಪತ್ರೆಯಲ್ಲಿರುವ ಮಕ್ಕಳಿಗೆ ನೀಡುತ್ತಿದ್ದಾರೆ. ವೈದ್ಯರ ಈ ಆಲೋಚನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಪತ್ನಿ ಡಾ.ತೇಜಾ ಮತ್ತು ಎಸ್ ಪಿ ಅವರ ಪತ್ನಿ ರುತುಜಾ ತಮ್ಮ ಮಕ್ಕಳ ಆಟಿಕೆ ಮತ್ತು ಹೊಸ ಗೊಂಬೆಗಳನ್ನು ಖರಿದೀಸಿ ಆಸ್ಪತ್ರೆಗೆ ನೀಡಿದ್ದಾರೆ.
ಇದೇ ರೀತಿ ಯಾದಗಿರಿಯ ಹಿರಿಯ ಅಧಿಕಾರಿಗಳು, ವೈದ್ಯರು ತಮ್ಮ ಮಕ್ಕಳ ಆಟಿಕೆಗಳ ಜೊತೆ ಹೊಸ ಗೊಂಬೆಗಳನ್ನು ಕೋವಿಡ್ ನಿಂದ ಬಳಲುತ್ತಿರುವ ಮಕ್ಕಳಿಗೆ ನೀಡುತ್ತಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಜಿಲ್ಲಾಡಳಿತದ ಜೊತೆ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://youtu.be/OYEMtBeW6b0