ಮಾಂಜರಿ: ಚಿಕ್ಕೋಡಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಡೂರಿನಲ್ಲಿ ಮಾ.೧ರಿಂದ ೬ರವರೆಗೆ ನಡೆದ ಮಹಾಕುಂಭೋತ್ಸವ, ರಾಜಗೋಪುರ ಲೋಕಾರ್ಪಣೆ ಹಾಗೂ ಕೃಷ್ಣಾರತಿ ಕಾರ್ಯಕ್ರಮ ಅದ್ದೂರಿಯಾಗಿ ಮಂಗಲಗೊಂಡವು.
ಲಕ್ಷಾಂತರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ದೇವಾಲಯ ಆವರಣ, ನದಿ ಘಾಟ್ ಹಾಗೂ ಗ್ರಾಮದ ಪ್ರಮುಖ ರಸ್ತೆಗಳು ಭಕ್ತರ ಜನಸಂದಣಿಯಿಂದ ಕಿಕ್ಕಿರಿದಿದ್ದವು.
ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಶಿ ಪೀಠದ ಜ್ಯೇಷ್ಠ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನೂತನ ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಹಾಗೂ ಉಜ್ಜಯಿನಿ ಪೀಠದ ರಾಜಗುರು ಸಿದ್ಧಲಿಂಗರಾಜ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಹಣ್ಣು, ಹೂವು, ಪ್ರಸಾದ, ಹೋಟೆಲ್ ಹಾಗೂ ಇತರ ವಸ್ತುಗಳ ಮಾರಾಟದಲ್ಲಿ ಹೆಚ್ಚಳವಾಗಿದೆ. ಆರು ದಿನ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ನಡೆದಿದ್ದು, ಆರ್ಥಿಕವಾಗಿ ಅನುಕೂಲಕರವಾಗಿದೆ.
ಯಶಸ್ಸಿಗೆ ಶ್ರಮಿಸಿದ ಹುಕ್ಕೇರಿ ಕುಟುಂಬ
ಯಡೂರ ಧಾರ್ಮಿಕ ಮಹೋತ್ಸವ ಯಶಸ್ಸಿಗೊಳಿಸಲು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಕುಟುಂಬಸ್ಥರು ಹಾಗೂ ಕಾರ್ಯಕರ್ತರು ಹಗಲು-ರಾತ್ರಿ ಶ್ರಮಿಸಿದ್ದು, ಶ್ರೀಗಳ ಹಾಗೂ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Laxmi News 24×7