ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿಯಲ್ಲಿ ಕಲುಷಿತ ನೀರು ಸೇವಿಸಿ 6 ಜನ ಸಾವನ್ನಪ್ಪಿರುವ ಕಾರಣ ಆತಂಕಗೊಂಡ ಕೆಲ ಕುಟುಂಬಗಳು ಗ್ರಾಮವನ್ನು ತೊರೆದು ಹೋಗಿವೆ. ಕೆಲ ಜನರು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಅಸ್ವಸ್ಥಗೊಂಡ ಕೆಲವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹುಬ್ಬಳ್ಳಿ, ದಾವಣಗೆರೆ, ಹಾವೇರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕರಬ್ಬಿ ಗ್ರಾಮದಲ್ಲಿ ಶಾಲೆಗೆ ತಾತ್ಕಾಲಿಕವಾಗಿ ರಜೆ ಘೋಷಣೆ ಮಾಡಲಾಗಿದೆ.
ವಾಂತಿಭೇದಿಯಿಂದ ಅಸ್ವಸ್ಥರಾಗಬಹುದೆಂಬ ಆತಂಕದಲ್ಲಿ ತಮ್ಮ ತಮ್ಮ ಮಕ್ಕಳನ್ನು ಗ್ರಾಮಸ್ಥರು ಸಂಬಂಧಿಕರ ಮನೆಗಳಿಗೆ ಕಳುಹಿಸಿದ್ದಾರೆ. ಸರಣಿ ಸಾವಿನಿಂದ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಉಳಿದವರಿಗೆ ಚಿಕಿತ್ಸೆ ಮುಂದುವರಿದಿದ್ದು, ಗ್ರಾಮದ ಸರ್ಕಾರಿ ಶಾಲೆಯಲ್ಲಿ 7-8 ತರಗತಿ ಮಕ್ಕಳಿಗೆ ರಜೆ ಘೋಷಣೆ ಮಾಡಿದ್ದಾರೆ.
ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಮೃತ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿ ಅಡಿ ಪರಿಹಾರ ನೀಡಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ವರದಿ ತರಿಸಿಕೊಳ್ಳಲು ಡಿಸಿಗೆ ಸೂಚನೆ ನೀಡಲಾಗುವುದು. ಗ್ರಾಮಕ್ಕೆ ಭೇಟಿ ನೀಡಲು ಡಿಸಿಗೆ ಸೂಚನೆ ನೀಡಲಾಗಿದೆ. ನೀರು ಯಾವ ಕಾರಣಕ್ಕೆ ಕಲುಷಿತವಾಗಿದೆ ಅನ್ನೋ ಬಗ್ಗೆ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ನೀರು ಕಲುಷಿತಗೊಳ್ಳಲು ಕಾರಣವೇನು?
ಬೋರ್ ವೆಲ್ನಿಂದ ಹೊಸ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ಈ ವೇಳೆ, ಹಳೆ ಪೈಪ್ ಗಳಿಗೆ ಡ್ಯಾಮೇಜ್ ಆಗಿದೆ. ಡ್ಯಾಮೇಜ್ ಆದ ಪೈಪ್ ನೊಳಗೆ ಚರಂಡಿ ನೀರು ಮಿಶ್ರವಾಗಿದ್ದು, ಇದೇ ನೀರನ್ನು ಮಕರಬ್ಬಿ ಗ್ರಾಮಸ್ಥರು ಸೇವಿಸಿದ್ದಾರೆ. ಸುಮಾರು 2 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರೋ ಮಕರಬ್ಬಿ ಗ್ರಾಮದಲ್ಲಿ ಈ ಕಾರಣದಿಂದ ಸುಮಾರು 200 ಕ್ಕೂ ಜನರು ವಾಂತಿಬೇಧಿಯಿಂದ ಬಳಲಿದ್ದರು. ಹುಬ್ಬಳ್ಳಿ, ದಾವಣಗೆರೆ, ಹಾವೇರಿ ಆಸ್ಪತ್ರೆಯಲ್ಲಿ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇದುವರೆಗೆ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಆಗಮಿಸಿಲ್ಲ. ಈ ಕುರಿತು ಜಿಲ್ಲಾಡಳಿತದ ವಿರುದ್ದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.