ತೆಲಸಂಗ: ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ನಿರ್ಮಲ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಇಂಗು ಬಚ್ಚಲು ಗುಂಡಿ ನಿರ್ಮಾಣ(ಸೋಕ್ ಪಿಟ್) ಅಭಿಯಾನ ಪ್ರಾರಂಭವಾಗಿದೆ.
ಅಂತರ್ಜಲ ವೃದ್ಧಿಗೆ ಹಾಗೂ ಆರೋಗ್ಯ ಸುರಕ್ಷತೆಗೆ ಪ್ರತಿಯೊಬ್ಬರೂ ಸರಕಾರದ ಸಹಾಯಧನದೊಂದಿಗೆ ಇಂಗು ಬಚ್ಚಲು ಗುಂಡಿ ನಿರ್ಮಾಣ ಮಾಡಿಕೊಳ್ಳಬೇಕು ಎಂದು ತಾಪಂ ಇಒ ರವಿ ಬಂಗಾರೆಪ್ಪನವರ ಹೇಳಿದರು.
ಗ್ರಾಮದಲ್ಲಿ ಇಂಗು ಬಚ್ಚಲು ಗುಂಡಿ ನಿರ್ಮಾಣ ಅಭಿಯಾನದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ 46 ಗ್ರಾಪಂಗಳಲ್ಲಿ ಪಾರದರ್ಶಕವಾಗಿ ಇದು ಅನುಷ್ಠಾನಗೊಳ್ಳಬೇಕು. ಪ್ರತಿಗ್ರಾಪಂಗೆ ಕನಿಷ್ಟ 50 ಇಂಗುಗುಂಡಿ, 10 ಪೌಷ್ಟಿಕಾಂಶ ಕೈ ತೋಟ ನಿರ್ಮಾಣ ಕಡ್ಡಾಯವಾಗಿದ್ದು, ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಗ್ರಾಮೀಣ ಭಾಗದಲ್ಲಿ ಜನರ ಸ್ಥಿತಿ ಮನದಲ್ಲಿಟ್ಟುಕೊಂಡು ಜಾರಿಯಾದ ಈ ಯೋಜನೆಯ ಲಾಭ ಪಡೆದು ಮಾದರಿ ಗ್ರಾಮವನ್ನಾಗಿಸಲು ಸಹಕರಿಸಬೇಕು. ಬಚ್ಚಲು ನೀರನ್ನು ಗಟಾರು ಅಥವಾ ಬೀದಿಗಳಲ್ಲಿ ಹರಿ ಬಿಡುವುದರಿಂದ ಸಾಂಕ್ರಾಮಿಕ ರೋಗ ಹುಟ್ಟಿಕೊಂಡು ಸಮಾಜದ ಸ್ವಾಸ್ಥ್ಯಹಾಳು ಮಾಡುತ್ತಿರುವ ಕಾರಣ ಇದನ್ನು ತಡೆಯಲು ಬಚ್ಚಲು ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಂಚಾಯತ ಸಿಬ್ಬಂದಿ ಮನೆ ಮನೆಗೆ ತೆರಳಿ ಈ ಯೋಜನೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ತಾಪಂ ಸಹಾಯಕ ನಿರ್ದೇಶಕ ಅರುಣ ಮಾಚಕನೂರ, ಪಿಡಿಒ ಬೀರಪ್ಪ ಕಡಗಂಚಿ, ಕಾರ್ಯದರ್ಶಿ ರವೀಂದ್ರ ಹಿರೇಮಠ, ಸಂಗಮೇಶ ಕುಮಠಳ್ಳಿ, ರಸೂಲ್ ಮುಲ್ಲಾ, ಮಹೇಶ ಕುಂಬಾರ, ಪವನ್ ಶಿಂಧೆ ಹಾಗೂ ಆಶಾ ಕಾರ್ಯ ಕರ್ತೆಯರು ಪಾಲ್ಗೊಂಡಿದ್ದರು.
Laxmi News 24×7