ವಿಜಯಪುರ: ಕಂಬಳಿಯಾದ್ರೂ ಹಾಕ್ತೀನಿ, ಟೋಪಿಯಾದ್ರೂ ಹಾಕ್ತೀನಿ.. ಇವನ್ಯಾರು ಕೇಳೋಕೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ವಿರುದ್ಧ ಕಿಡಿಕಾರಿದ್ದಾರೆ.
ಸಿಂದಗಿ ಉಪ ಚುನಾವಣೆ ಪ್ರಚಾರಕ್ಕೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಕಂಬಳಿ ಹಾಕಿದವರೆಲ್ಲಾ ಕುರುಬ ಸಮಾಜದಲ್ಲಿ ಹುಟ್ಟಿದವರಲ್ಲ ಎಂದಾದರೆ ಟೋಪಿ ಹಾಕಿದವರೆಲ್ಲ ಯಾರು..? ಎಂಬ ಸಿ.ಟಿ ರವಿ ಅವರ ಟ್ವೀಟ್ಗೆ ತಿರುಗೇಟು ನೀಡಿದ ಅವರು, ನಾನು ಕಂಬಳಿನೂ ಹಾಕುತ್ತೇನೆ ಹಾಕುತ್ತೇನೆ, ಟೋಪಿಯನ್ನ ಹಾಕ್ತೇನೆ.. ಗಾಂಧಿ ಟೋಪಿ ಹಾಗೂ ಹಿಂದೂ ಟೋಪಿಯನ್ನೂ ಹಾಕುತ್ತೇನೆ. ಅದನ್ನು ಕೇಳಲು ಇವನ್ಯಾರು..? ಎಂದು ಕಿಡಿಕಾರಿದರು.
ಉಪಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೆ ಮೀರಿ ರೆಸ್ಪಾನ್ಸ್ ಸಿಕ್ಕಿದೆ. ನಮ್ಮ ಪರವಾದ ಪ್ರತಿಕ್ರಿಯೆ ಇದೆ, ಹಳ್ಳಿ-ಪಟ್ಟಣಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಇದೆ. ಕಾಂಗ್ರೆಸ್ ಪರವಾದ ಅಲೆ ಇದ್ದು, ಬಿಜೆಪಿ ಬಳಿ ಅಭಿವೃದ್ಧಿ ಬಗ್ಗೆ ಹೇಳಿಕೊಳ್ಳಲು ಏನಿಲ್ಲ? ಮೋದಿಯದ್ದು ಜನ ವಿರೋಧಿ ಕೆಲಸ.. ಬಿಜೆಪಿ ಆಡಳಿತಕ್ಕೆ ಜನ ಬೇಸತ್ತಿದ್ದಾರೆ. ಕರ್ನಾಟಕದಲ್ಲಿ ಜನ ಶಾಪ ಹಾಕುತ್ತಿದ್ದಾರೆ. ಜೆಡಿಎಸ್ ಸ್ಪರ್ಧೆಯಲ್ಲೇ ಇಲ್ಲ. ಅಲ್ಪ ಸಂಖ್ಯಾತರು ಜಾತ್ಯಾತೀತ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದಾರೆ.
ಇದೇ ವೇಳೆ ಡ್ರಗ್ಸ್ ಹಾಗೂ ಬಿಟ್ ಕಾಯಿನ್ ಕೇಸ್ ಬಗ್ಗೆ ಪ್ರಧಾನಿ ಕಚೇರಿಯಿಂದ ರಾಜ್ಯ ಡಿಜಿಐಜಿಪಿಗೆ ಪತ್ರ ಬಂದಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ತನಿಖಾಧಿಕಾರಿಗಳು ಬಿಟ್ ಕಾಯಿನ್ ಕೇಸ್ ಮುಚ್ಚಿ ಹಾಕುತ್ತಿದ್ದಾರೆ ಎಂಬ ಮಾಹಿತಿ ನನಗೂ ಸಿಕ್ಕಿದೆ. ಈ ಕೇಸ್ನಲ್ಲಿ ರಾಜ್ಯದ ಪ್ರಭಾವಿಗಳಿದ್ದಾರೆ ಎಂಬ ಮಾಹಿತಿ ಇದೆ. ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಬಿಡಬಾರದು. ಈ ಕೇಸಲ್ಲಿ ಇರೋರನ್ನ ಎಕ್ಸ್ಪೋಸ್ ಮಾಡಬೇಕು. ಕೇಸ್ ಇನ್ನು ಕ್ಲೋಸ್ ಆಗಿಲ್ಲ, ಇನ್ನೂ ಆ ಕೇಸ್ ನ ಫೈನಲ್ ರಿಪೋರ್ಟ್ ಕೊಟ್ಟಿಲ್ಲ. ಯಾರಿಗೂ ರಕ್ಷಣೆ ಕೊಡುವ ಕೆಲಸ ಆಗಬಾರದು ಎಂದರು.