ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಕಾರ್ 30 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರಿಗೆ ಗಂಭೀರ ಗಾಯವಾಗಿದೆ.
ಜಿಲ್ಲೆಯ ಶಿರಾ ತಾಲೂಕಿನ ಹೊನ್ನೇಹಳ್ಳಿ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ಎದುರಿನಿಂದ ಏಕಾಏಕಿ ವಾಹನ ಬಂದಿದೆ. ವಾಹನಕ್ಕೆ ಡಿಕ್ಕಿ ತಪ್ಪಿಸಲು ಹೋಗಿ ಕಾರ್ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಹ್ಯೂಂಡೈ ಐ-20 ಕಾರ್ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಬಸವರಾಜು ಸೇರಿದಂತೆ ಒಟ್ಟು ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ.
ಮೃತರು ಶಿರಾ ತಾಲೂಕಿನ ಬರಗೂರು ಗ್ರಾಮದವರಾಗಿದ್ದು, ಕಾರಿನಲ್ಲಿದ್ದ ನವೀನ್ ಹಾಗೂ ಸಚಿನ್ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಬುಕ್ಕಾ ಪಟ್ಟಣದ ಮರಡಿ ಗುಡ್ಡದಿಂದ ತಮ್ಮ ಮನೆಗೆ ವಾಪಸ್ಸಾಗುತ್ತಿದ್ದರು ಎನ್ನಲಾಗಿದೆ. ಶಿರಾ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.