ತುಮಕೂರು: ತುಮಕೂರಿನಲ್ಲಿ ಕೊರೊನಾಗೆ ಎರಡನೇ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಹಾ ಎಡವಟ್ಟು ಮಾಡಿದ್ದು, ಸ್ಯಾಂಪಲ್ಸ್ ವರದಿ ಬರುವ ಮುನ್ನವೇ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಿದೆ. ಇದೀಗ ವರದಿ ಪಾಸಿಟಿವ್ ಬಂದಿದ್ದು, ಗ್ರಾಮಸ್ಥರಲ್ಲಿ ಭಾರೀ ಆತಂಕ ಮನೆ ಮಾಡಿದೆ.
ಏ.25 ರಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿ 26 ರಂದು ಮೃತಪಟ್ಟಿದ್ದ. ಏ.25, 26ರಂದು ಎರಡು ಬಾರಿ ಸ್ಯಾಂಪಲ್ಸ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ವರದಿ ಬರುವ ಮುನ್ನವೇ ಏ.26 ರಂದು ಕುಟುಂಬಸ್ಥರಿಗೆ ಮೃತ ದೇಹ ಹಸ್ತಾಂತರ ಮಾಡಲಾಗಿದೆ. ಶವ ನೀಡುತ್ತಿದ್ದಂತೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಕುಟುಂಬಸ್ಥರು ತುಮಕೂರು ಗ್ರಾಮಾಂತರದ ಲಾಯ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಿದ್ದು, ಇದೀಗ ಮೃತ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಲಾಯ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಜಿಲ್ಲಾಡಳಿತದ ಮಹಾ ಎಡವಟ್ಟಿಗೆ ಜನ ಕಂಗಾಲಾಗಿದ್ದಾರೆ.
ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರು ರೋಗಿ ನಂ.535 ಮೃತ ವ್ಯಕ್ತಿಗೆ ಕೊರೊನಾ ವೈರಸ್ ತಗುಲಿದ್ದನ್ನು ದೃಢಪಡಿಸಿದ್ದಾರೆ. ಈ ಮೂಲಕ ತುಮಕೂರಿನಲ್ಲಿ ಕೊರೊನಾ ಗೆ ಎರಡನೇ ಬಲಿಯಾದಂತಾಗಿದೆ. ನಗರದ ಕೆ.ಹೆಚ್.ಪಿ ಕಾಲೋನಿ ವಾಸಿಯಾಗಿದ್ದ ರೋಗಿ ನಂ.535, ಏ.25 ರಂದು ಉಸಿರಾಟದ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. 26 ರಂದು ಮೃತಪಟ್ಟಿದ್ದ. ಈತನಿಗೆ ಟ್ರಾವೆಲ್ ಹಿಸ್ಟರಿ ಇರಲಿಲ್ಲ.
ಉಸಿರಾಟದ ತೊಂದರೆ ಪ್ರಕರಣಗಳು ತುಮಕೂರು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಮೃತ ವ್ಯಕ್ತಿಯ ನಿವಾಸದ 100 ಮೀ. ವ್ಯಾಪ್ತಿಯನ್ನು ಇದೀಗ ಕಂಟೈನ್‍ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಮೃತ ಕುಟುಂಬದ ನಾಲ್ಕು ಮಂದಿಯನ್ನು ಐಸೋಲೇಷನ್‍ನಲ್ಲಿಡಲಾಗಿದ್ದು, ಪ್ರಾಥಮಿಕ ಸಂಪರ್ಕ ಹೊಂದಿದ್ದ 51 ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ವಿವರಿಸಿದ್ದಾರೆ.