ಬೆಳಗಾವಿ: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಕುಂದಾ ನಗರಿ ಬೆಳಗಾವಿ ಅಕ್ಷರಶಃ ಮದುವಣಗಿತ್ತಿಯಂತೆ ಕಂಗೊಳ್ಳಿಸುತ್ತಿದ್ದು, ಕನ್ನಡ ರಾಜ್ಯೋತ್ಸವದ ಮೆರವಣೆಗೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಅಪಾರ ಅಭಿಮಾನಿಗಳ ಜತೆ ಹೆಜ್ಜೆ ಹಾಕಿ ರಾಜೋತ್ಸವಕ್ಕೆ ಇನ್ನಷ್ಟು ಮೆರಗು ತಂದರು.
ನಂತರ ಚೆನ್ನಮ್ಮ ವೃತ್ತದಲ್ಲಿ ಹಾಕಲಾದ ಟೆಂಟ್‌ನಲ್ಲಿ ಕುಳಿತು ರಾಜ್ಯೋತ್ಸವದ ಅದ್ಧೂರಿ ಮೆರವಣಿಗೆಯನ್ನು ವಿಕ್ಷೀಸಿದರು. ಅಪಾರ ಸಂಖ್ಯೆಯ ಯುವಕರು, ಯುವತಿಯರು, ಕನ್ನಡಪರ ಹೋರಾಟಗಾರರು ಶಾಸಕ ಸತೀಶ್ ಜಾರಕಿಹೊಳಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ ಅವರು, ಕನ್ನಡ ಅಭಿವೃದ್ಧಿ ಬಗ್ಗೆ ಸರ್ಕಾರ ಒಲವು ತೋರಬೇಕು. ಬೆಳಗಾವಿ ರಾಜ್ಯೋತ್ಸವ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಇಲ್ಲಿರುವ ಕನ್ನಡಾಭಿಮಾನ ನೋಡಲು ಎರಡು ಕಣ್ಣು ಸಾಲದು, ಹೀಗಾಗಿ ಗಡಿನಾಡಿನಲ್ಲಿ ಕನ್ನಡಪರ ಸಂಘಟನೆಗಳು ಗಟ್ಟಿಗೊಳಿಸಬೇಕು. ಸಂಘಟನೆಗಳು ಬಲಿಷ್ಠವಾದರೆ, ನಮ್ಮ ಉಸಿರಾಗಿರುವ ಕನ್ನಡ ಬೆಳೆಯಲು ಸಾಧ್ಯ. ಉತ್ತರ ಕರ್ನಾಟಕದಲ್ಲಿ ಕನ್ನಡ ಅಭಿವೃದ್ಧಿ ಬಗ್ಗೆ ಸರ್ಕಾರ ವಿಷೇಶ ಗಮನ ವಹಿಸಬೇಕು ಎಂದು ಆಗ್ರಹಿಸಿದರು.
ದಕ್ಷಿಣ ಕರ್ನಾಟಕದಲ್ಲಿ ಕನ್ನಡ ಅಭಿವೃದ್ಧಿಗೆ ಸಾಕಷ್ಟು ಅನುದಾನ ವ್ಯಯವಾಗುತ್ತಿದೆ. ಅರ್ಧದಷ್ಟು ಅನುದಾನ ಈ ಭಾಗದ ಕನ್ನಡಾಭಿನಿಗಳಿಗೆ ಕೊಟ್ಟರೆ, ನಾಡ ಪ್ರೇಮ ಇನ್ನಷ್ಟು ಉತ್ತುಂಗಕ್ಕೇರುವುದು ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರ್ಶೀವಾದ ಪಡೆದ ಬನಾರಸ್ ಚಿತ್ರ ನಟ ಝೈದ್ ಖಾನ: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿದ ಬನಾರಸ್ ಚಿತ್ರದ ನಾಯಕ ನಟ ಝೈದ್ ಖಾನ್
ಬೆಳಗಾವಿ ರಾಜ್ಯೋತ್ಸವದ ಬೃಹತ್ ಮೆರವಣಿಗೆಯಲ್ಲಿ ಭಾಗಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಆರ್ಶೀವಾದ ಪಡೆದರು.
ಇಲ್ಲಿನ ಚೆನ್ನಮ್ಮ ವೃತ್ತವನ್ನು ಹೂವು, ಬಾಳೆ ಗಿಡಗಳಿಂದ ಸಿಂಗರಿಸಲಾಗಿತ್ತು. ಪ್ರಮುಖ ಬೀದಿಗಳು ಕನ್ನಡ ಬಾವುಟ ಮತ್ತು ಹೂಗಳಿಂದ ಅಲಂಕಾರಗೊಂಡಿದ್ದವು. ವಿದ್ಯಾರ್ಥಿಗಳು ಹಾಗೂ ಯುವಕರು ಚೆನ್ನಮ್ಮ ವೃತ್ತದ ಚೆನ್ನಮ್ಮ ಪುತ್ಥಳಿ ಎದುರು ಡಿಜೆ ಸೌಂಡಿಗೆ ಹೆಜ್ಜೆ ಹಾಕಿ ಸಂಭ್ರಮ ಪಟ್ಟರು. ಅನೇಕ ಕಲಾ ತಂಡಗಳು ತಮ್ಮ ಕಲೆಗಳನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸುನೀಲ್ ಹನಮನ್ನವರ, ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ., ಜಿಪಂ ಮಾಜಿ ಸದಸ್ಯ ಸಿದ್ದು ಸುಣಗಾರ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್, ಅನಂತಕುಮಾರ ಬ್ಯಾಕೂಡ್, ರಾಮಣ್ಣ ಗುಳ್ಳಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಇದ್ದರು.