ಶಿವಮೊಗ್ಗ: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 7 ದಿನದ ಹಸುಗೂಸಿನ ಜೀವ ಉಳಿಸಲು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಂಬುಲೆನ್ಸ್‌ನಲ್ಲಿ ರವಾನಿಸಲಾಗಿದೆ.
ಮೆಗ್ಗಾನ್ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಶಿವಮೊಗ್ಗದಿಂದ ಜೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಕಂದಮ್ಮನನ್ನು ಅಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮದ ಸ್ವಾಮಿ ಹಾಗೂ ಸುಧಾ ದಂಪತಿಗೆ ಫೆ. 4ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಜನನದ ನಂತರ ಮಗುವನ್ನು ಪರೀಕ್ಷಿಸಿದ ವೈದ್ಯರಿಗೆ ಮಗುವಿನ ಹೃದಯದಲ್ಲಿ ಸಣ್ಣ ರಂಧ್ರವಿರುವುದು ಪತ್ತೆಯಾಗಿದೆ.
ಸ್ಕ್ಯಾನಿಂಗ್ ವರದಿಯಲ್ಲಿ ಸಹ ಹೃದಯದಲ್ಲಿ ರಂಧ್ರ ಇರುವುದು ದೃಢಪಟ್ಟಿದೆ. ಹೀಗಾಗಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಪೋಷಕರಿಗೆ ಸಲಹೆ ನೀಡಿದ್ದಾರೆ.
ಈ ಹಿನ್ನೆಲೆ ಇಂದು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಅಂಬುಲೆನ್ಸ್‌ನಲ್ಲಿ ಕಳುಹಿಸಲಾಯಿತು. ನಗರದ ದೊಡ್ಡಪೇಟೆ ಠಾಣೆ ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆ ಜೊತೆಗೆ ಎಸ್ಕಾರ್ಟ್ ವಾಹನವನ್ನು ಅಂಬುಲೆನ್ಸ್ ಜೊತೆ ಕಳುಹಿಸಿದ್ದಾರೆ.