ಬೆಳಗಾವಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ 2022-23ನೇ ಸಾಲಿನ ಬಜೆಟ್ ಶೂನ್ಯ ಬಜೆಟ್ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರಿದ್ದರೂ, ರಾಜ್ಯವನ್ನೇ ಪ್ರತಿನಿಧಿಸಿದ್ದರೂ ಹಣಕಾಸು ಸಚಿವರು, ರಾಜ್ಯದ ಜನರ ನಿರೀಕ್ಷೆ ಹುಸಿಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ.
ದೇಶದ ಜನರು ಏಳು ವರ್ಷಗಳಿಂದ ಅಪಾರ ನಿರೀಕ್ಷೆಯಿಟ್ಟುಕೊಂಡು ಬಿಜೆಪಿಗೆ ಅಧಿಕಾರ ನೀಡಿದ್ದರು. ಆದರೆ, ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಲಾಗಿದೆ. ಬಜೆಟ್‌ನಲ್ಲಿ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಏನೂ ದೊರೆತಿಲ್ಲ. ಕೋವಿಡ್ ಸೋಂಕಿನ ಸಂಕಷ್ಟದಲ್ಲಿ ದೇಶದಲ್ಲೇ ಕರ್ನಾಟಕ್ಕೆ ದೊಡ್ಡ ಹಾನಿಯಾಗಿತ್ತು. ದುಡಿಯುವ ಹಾಗೂ ಮಧ್ಯಮ ವರ್ಗವು ಪರಿಹಾರಕ್ಕಾಗಿ ನಿರೀಕ್ಷಿಸಿದ್ದವು. ಆದರೆ, ಇದು ನಿರಾಶಾದಾಯಕ ಬಜೆಟ್ ಆಗಿದೆ. ಯಾವುದೇ ಹೊಸ ಯೋಜನೆ ನೀಡದೇ ಕರ್ನಾಟಕ ರಾಜ್ಯಕ್ಕೆ ದ್ರೋಹ ಬಗೆದಿದೆ ಎಂದು ಟೀಕಿಸಿದ್ದಾರೆ.