ಬೆಳಗಾವಿ ಜಿಲ್ಲಾ ವ್ಯಾಪ್ತಿಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಗೆ ಸಂಯೋಜನೆಗೊಂಡಿರುವ ಕಾಲೇಜುಗಳ ಸಂಘ, ವಿಶ್ವವಿದ್ಯಾಲಯ, ಕರ್ನಾಟಕ ದಿಶಾ ಭೋದ್ ಫೌಂಡೇಶನ್ ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅವರ ಸಹಯೋಗದಲ್ಲಿ ‘ಸ್ವಾಸ್ಥ್ಯ ಭಾರತ – ಶ್ರೇಷ್ಠ ಭಾರತ’ ಎಂಬ ಘೋಷಣೆಯಡಿ ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಅಂಗಾಂಗ ದಾನ ಜಾಗೃತಿ ಅಭಿಯಾನ ಮತ್ತು ಜಾಥಾ (ವಾಕಥಾನ್) ಕಾರ್ಯಕ್ರಮವನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ವೈದ್ಯರು ಹಾಗೂ ವಿವಿಧ ಕಾಲೇಜುಗಳ ಪ್ರತಿನಿಧಿಗಳು ಉತ್ಸಾಹಭರಿತವಾಗಿ ಭಾಗವಹಿಸಿ, ನಶಾ ವಿರೋಧಿ ಘೋಷಣೆಗಳೊಂದಿಗೆ ಜಾಗೃತಿ ಮೂಡಿಸಿದರು. ಯುವಜನರಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಸಂದೇಶವನ್ನು ಈ ಅಭಿಯಾನ ಸಾರಿತು.
ಇತ್ತೀಚಿನ ದಿನಗಳಲ್ಲಿ ಕೆಲ ಯುವಕರು ಮಾದಕ ವಸ್ತುಗಳ ಸೇವನೆಗೆ ಒಳಗಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದು ವಿಷಾದನೀಯ. ಇದು ಕೇವಲ ಅವರ ಆರೋಗ್ಯಕ್ಕಷ್ಟೇ ಅಲ್ಲ, ಕುಟುಂಬ ಮತ್ತು ಸಮಾಜದ ಸ್ಥಿರತೆಗೆ ಕೂಡ ದೊಡ್ಡ ಅಪಾಯವಾಗುತ್ತಿದೆ. ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ಆದ್ದರಿಂದ ಯುವಕರು ನಶಾ ಪದಾರ್ಥಗಳಿಂದ ದೂರವಿದ್ದು, ಕ್ರೀಡೆ, ಶಿಕ್ಷಣ ಮತ್ತು ಸಕಾರಾತ್ಮಕ ಚಟುವಟಿಕೆಗಳತ್ತ ಗಮನ ಹರಿಸಬೇಕು ಎಂಬ ಕರೆಯನ್ನು ಈ ವಾಕಥಾನ್ ಮೂಲಕ ನೀಡಲಾಯಿತು.
ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ. ಆರೋಗ್ಯಕರ ಯುವಜನತೆ ಇದ್ದರೆ ಮಾತ್ರ ಶ್ರೇಷ್ಠ ಭಾರತ ನಿರ್ಮಾಣ ಸಾಧ್ಯ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
#SatishJarkiholi #belagavi
Laxmi News 24×7