ಬಳ್ಳಾರಿ: ಲಾಕ್‍ಡೌನ್ ನಡುವೆಯೂ ಅಕ್ಷಯ ತೃತಿಯ ನಿಮಿತ್ತ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ನಾಲ್ಕು ಜೋಡಿ ಬಾಲ್ಯವಿವಾಹ ಪ್ರಕರಣಗಳು ಪತ್ತೆ ಯಾಗಿವೆ.
ಕೂಡ್ಲಿಗಿ ತಾಲೂಕು, ಬಳ್ಳಾರಿ ನಗರ, ಸಂಡೂರು ತಾಲೂಕು ಹಾಗೂ ಬಳ್ಳಾರಿ ತಾಲೂಕಿನಲ್ಲಿ ನಡೆಯುತ್ತಿದ್ದ ಎರಡು ನಿಶ್ಚಿತಾರ್ಥ ಹಾಗೂ ಎರಡು ಬಾಲ್ಯವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ.
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಮೂಲದ 17 ವರ್ಷದ ಯುವತಿಗೆ ಬೆಳಗ್ಗೆ 5 ಗಂಟೆಗೆ ತರಾತುರಿಯಲ್ಲಿ ನಿಶ್ಚಿತಾರ್ಥ ಮಾಡಿ ಮುಗಿಸಿದ್ದಾರೆ. ಇನ್ನೊಂದೆಡೆ ಬಳ್ಳಾರಿ ಗಾಂಧಿನಗರ ಮೂಲದ 16.8 ವರ್ಷದ ಬಾಲಕಿಗೆ ನಿಶ್ಚಿತಾರ್ಥ ಮಾಡಲು ಮುಂದಾದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ರಕ್ಷಿಸಿದ್ದಾರೆ. ಈ ಇಬ್ಬರು ಬಾಲಕಿಯೊಂದಿಗೆ ಮದುವೆಯಾಗಲು ಮುಂದಾಗಿದ್ದ ವರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕು ಹಾಗೂ ಬಳ್ಳಾರಿ ತಾಲೂಕಿನ ಯಾಳ್ಪಿ ಗ್ರಾಮದಲ್ಲಿ ನಡೆಯಬೇಕಿದ್ದ ಎರಡು ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಅಲ್ಲದೆ ಬಾಲ್ಯ ವಿವಾಹ ತಡೆಯಲು ಹೋಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ವಧು-ವರರ ಕಡೆಯವರು ಕಟ್ಟುಕಥೆಗಳನ್ನು ಹೇಳಿದ್ದಾರೆ. ಬಳ್ಳಾರಿಯ ಗಾಂಧಿನಗರ ಮೂಲದ 16 ವರ್ಷದ ಬಾಲಕಿಯ ಕಡೆಯವರು ಪ್ರೀತಿ, ಪ್ರೇಮ, ಪ್ರಣಯದ ಮಾತುಗಳನ್ನಾಡಿದ್ದಾರೆ. ನನ್ನ ಮಗಳು ಕಾಲೇಜು ಹಂತದಲ್ಲಿ ಹುಡುಗನನ್ನು ಪ್ರೀತಿ ಮಾಡಿದ್ದಾಳೆ. ಹೀಗಾಗಿ ನನ್ನ ಮನೆತನದ ಪ್ರತಿಷ್ಠೆ- ಗೌರವ ಏನಾದೀತು ಎಂಬ ಕಟ್ಟುಕಥೆಯನ್ನು ಕಟ್ಟಿದ್ದಾರೆ.
ಇಬ್ಬರು ಬಾಲಕಿಯರು ಶಾಂತಿಧಾಮದಲ್ಲಿ, ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹಾಗೂ ಬಳ್ಳಾರಿ ಗಾಂಧಿನಗರ ಮೂಲದ ಇಬ್ಬರು ಬಾಲಕಿಯರನ್ನು ರಕ್ಷಣೆ ಮಾಡಿ ನಗರದ ಶಾಂತಿಧಾಮದಲ್ಲಿ ಇರಿಸಲಾಗಿದೆ. ಅಲ್ಲದೆ ನಾಲ್ಕು ಜನ ವರನ ಅವಲಂಬಿತರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.