ರಾಮನಗರ: ಅನಾರೋಗ್ಯದಿಂದ ಬಳಲುತ್ತಿದ್ದ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ(68) ವಿಧಿವಶರಾಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಅನೇಕ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಸುಮಾರು 2.10ಕ್ಕೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಬಿಡದಿಯಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಜನವರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದ್ದರು. ನನ್ನ ಆರೋಗ್ಯದ ಕುರಿತು ಹರಿದಾಡುತ್ತಿರುವ ವಿಷಯಗಳು ಸತ್ಯ, ನನಗೆ ಕ್ಯಾನ್ಸರ್ ಇರುವುದು ನಿಜ. ಮಿರಾಕಲ್ ನಡೆಯುತ್ತಿರುವುದು ನಿಜವಾಗಿದ್ದು, ವಿಲ್ ಪವರ್ ನಿಂದ ಆರೋಗ್ಯವಾಗಿದ್ದೇನೆ. ಅಲ್ಲದೇ ಟಿಕೆಟ್ ಯಾವಾಗಲೋ ಕನ್ಫರ್ಮ್ ಆಗಿದ್ದು, ಓಕೆ ಆದ್ಮೇಲೆ ಫ್ಲೈಟ್ ಹತ್ತಬೇಕು ಅಷ್ಟೇ ಎಂದು ಭಾವನಾತ್ಮಕವಾಗಿ ಮಾತನಾಡಿದ್ದರು.
ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್‍ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಮುತ್ತಪ್ಪ ರೈ ಕೆಲವು ತಿಂಗಳಿನಿಂದ ಉತ್ತಮ ಆಡಳಿತ ನಡೆಸುತ್ತಿದ್ದರು. ಅದರಲ್ಲೂ ಗ್ರಾಮೀಣ ಭಾಗದ ಕ್ರೀಡಾಪಟುಗಳ ನೆರವಿಗೆ ನಿಲ್ಲುವುದರ ಮೂಲಕ ಉತ್ತಮ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಪೂರ್ಣ ವಿಶ್ರಾಂತಿಯಲ್ಲಿದ್ದರು.