ರಾಮದುರ್ಗ: ಪ್ರವಾಹದಿಂದಾಗಿ ಹಾನಿಗೊಳಗಾದ ಬೆಳೆ ಹಾಗೂ ಮನೆಗಳ ಸರ್ವೇ ಕಾರ್ಯವನ್ನು ಜಂಟಿಯಾಗಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಮಾಡಬೇಕು. ಏನಾದರೂ ಲೋಪದೋಷ ಎಸಗಿದಲ್ಲಿ ಅಂತವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಶಾಸಕ ಮಹಾದೇವಪ್ಪ ಯಾದವಾಡ ಅಧಿಕಾರಿಗಳಿಗೆ ಖಡಕ ಸೂಚನೆ ನೀಡಿದರು.
ಸ್ಥಳೀಯ ತಾಪಂ ಸಭಾಭವನದಲ್ಲಿ ಮಂಗಳವಾರ ಪ್ರವಾಹಕ್ಕೆ ಸಂಬಂಧಿಸಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ಬಾರಿ ತಪ್ಪು ನಡೆಯಬಾರದು. ಆ ಸಂದರ್ಭದಲ್ಲಿ ಮಾಡಿದ ತಪ್ಪು ಇನ್ನೂವರೆಗೂ ಬಗೆಹರಿಯುತ್ತಿಲ್ಲ. ನೋಡಲ್ ಅಧಿಕಾರಿಗಳು ಅತ್ಯಂತ ಜಾಗೃತೆಯಿಂದ ಸಮೀಕ್ಷೆ ಕಾರ್ಯ ಮಾಡಬೇಕು ಎಂದು ಹೇಳಿದರು. ಕಳೆದ ವರ್ಷ 28 ಗ್ರಾಮಗಳು ಹಾಗೂ ಪಟ್ಟಣದ 9 ವಾರ್ಡ್‌ಗಳು ಪ್ರವಾಹಕ್ಕೆ ತುತ್ತಾಗಿದ್ದವು. ಈ ಭಾರಿ 13 ಗ್ರಾಮಗಳು ಮತ್ತು ಪಟ್ಟಣದ ನಾಲ್ಕು ವಾರ್ಡ್‌ಗಳು ತುತ್ತಾಗಿವೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.
ಇನ್ನೊಮ್ಮೆ ಸರಿಯಾಗಿ ಪರಿಶೀಲಿಸಿ ವರದಿ ಸಿದ್ಧಪಡಿಸಬೇಕು. ಅಲ್ಲದೇ ತೋಟಗಳಲ್ಲಿರುವ ಮನೆಗಳನ್ನು ಕೈಬಿಡದೆ ಫಾರ್ಮ್ಹೌಸ್ ಎಂದು ಪರಿಗಣಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ನೈಜ ಸಂತ್ರಸ್ತರಿಗೆ ಅನ್ಯಾಯವಾಗಬಾರದು ಎಂದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸರ್ವೇ ಕಾರ್ಯವನ್ನು ನಡೆಸಿ ನೈಜ ವರದಿಯನ್ನು ತಾಲೂಕಾಡಳಿತಕ್ಕೆ ಸಲ್ಲಿಸಬೇಕು. ಅಂದಾಜು ಮಾಹಿತಿಯಂತೆ ಬೇಕಾಬಿಟ್ಟಿ ವರದಿ ನೀಡಿದಲ್ಲಿ ನಿಮ್ಮನ್ನೇ ಹೊಣೆಗಾರನ್ನಾಗಿ ಮಾಡಲಾಗುವುದು. ಅಲ್ಲದೇ ಹೆಸ್ಕಾಂ ಇಲಾಖೆಯವರು ಆದಷ್ಟು ಬೇಗ ಹಾನಿಗೀಡಾದ ಕಂಬಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ದುರಸ್ತಿಪಡಿಸಿ ಬೇಗನೆ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ತಹಶೀಲ್ದಾರ್ ಗಿರೀಶ ಸ್ವಾದಿ ಮಾತನಾಡಿ, ನೋಡಲ್ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆಯನ್ನು
ಪರಿಪೂರ್ಣವಾಗಿಸಿ ನಾಲ್ಕು ದಿನಗಳಲ್ಲಿ ವರದಿ ನೀಡಬೇಕು. ಯಾವುದೇ ಮನೆಗಳನ್ನು ಅಧಿಕೃತ ಹಾಗೂ ಅನಧಿಕೃತ ಎಂದು ನೀವೇ ತೀರ್ಮಾನಿಸತಕ್ಕದಲ್ಲ. ಅಲ್ಲಿನ ವಾಸ್ತವ ಸ್ಥಿತಿ ಪರಿಗಣಿಸಿ ತೋಟಗಳಲ್ಲಿದ್ದರೆ ಪಹಣಿ ಹಾಗೂ ಗ್ರಾಮಗಳಲ್ಲಿದ್ದರೆ ಪಂಚಾಯತ ಉತಾರ ಪಡೆದು ಮಾಹಿತಿ ಪೂರ್ಣಗೊಳಸಿಬೇಕು. ಮುಂದೆ ಇದನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕಿದೆ. ಆದ್ದರಿಂದ ಸಮೀಕ್ಷೆ ಸಂದರ್ಭದಲ್ಲಿ ಸರಕಾರದ ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.
ತಾಪಂ ಇಒ ಮುರಳಿಧರ ದೇಶಪಾಂಡೆ, ಗ್ರೇಡ್ -2 ತಹಶೀಲ್ದಾರ್ ಸೋಮಶೇಖರ ತಂಗೋಳ್ಳಿ ಮೊದಲಾದವರು ಉಪಸ್ಥಿತರಿದ್ದರು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??