ರಾಮನಗರ: ಪೋಷಕರ ಬಳಿ ಮಲಗಿದ್ದ 3 ವರ್ಷದ ಮಗುವನ್ನ ಹೊತ್ತೊಯ್ದು ತಿಂದಿದ್ದ ನರಭಕ್ಷಕ ಚಿರತೆ ಮಾಗಡಿ ತಾಲೂಕಿನ ಕದಿರಯ್ಯನ ಪಾಳ್ಯದಲ್ಲಿ ಬೋನಿನಲ್ಲಿ ಸೆರೆ ಸಿಕ್ಕಿದೆ.
ಕದಿರಯ್ಯನ ಪಾಳ್ಯದಲ್ಲಿ ಮೇ 9ರಂದು ನಸುಕಿನ ಜಾವ ಚಿರತೆ ಬಾಲಕ ಹೇಮಂತ್‍ನನ್ನು ಕೊಂದು ಹಾಕಿತ್ತು. ಇದರಿಂದಾಗಿ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಚಿರತೆಯ ಸೆರೆಗೆ ಮುಂದಾಗಿದ್ದ ಅರಣ್ಯ ಇಲಾಖೆಯು ಕದಿರಯ್ಯನ ಪಾಳ್ಯದಲ್ಲಿ ಬೋನು ಇಟ್ಟಿತ್ತು.
ಚಿರತೆಯು ಇಂದು ಬೋನಿಗೆ ಬಿದ್ದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆಯಾದ ಹಿನ್ನೆಲೆ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.
ಮೃತ ಹೇಮಂತ್ ದೊಡ್ಡೇರಿ ಗ್ರಾಮದ ಚಂದ್ರಶೇಖರ್ ಮತ್ತು ಮಂಗಳ ದಂಪತಿಯ ಮಗುವಾಗಿದೆ. ಮೇ 8ರಂದು ರಾತ್ರಿ ಮನೆಯಲ್ಲಿ ಹೇಮಂತ್ ತಂದೆ-ತಾಯಿಯ ಜೊತೆ ಮಲಗಿದ್ದನು. ಆದರೆ ಪೋಷಕರು ಸೆಕೆ ಹೆಚ್ಚಾಗಿದ್ದರಿಂದ ಬಾಗಿಲನ್ನ ತೆಗೆದು ಮಲಗಿದ್ದರು. ಈ ವೇಳೆ ಬಂದ ಚಿರತೆ ಮಲಗಿದ್ದ ಮಗುವನ್ನ ಹೊತ್ತೊಯ್ದಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದೌಡಾಯಿಸಿ, ಮಗುವಿಗಾಗಿ ಹುಡುಕಾಟ ಶುರುಮಾಡಿದ್ದರು. ಆದರೆ ಮಗುವಿನ ಅರ್ಧ ದೇಹ ಮನೆ ಬಳಿ ಇರುವ ಕಾಡಿನಲ್ಲಿ ಪತ್ತೆಯಾಗಿತ್ತು.