ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3 ರ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಕೇಂದ್ರದ ಜಲಸಂಪನ್ಮೂಲ ಸಚಿವರ ಜೊತೆಯೂ ಚರ್ಚಿಸಲಾಗಿದೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಆಲಮಟ್ಟಿಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಹಿನ್ನಲೆಯಲ್ಲಿ ಈ ಯೋಜನೆಗೆ ಅಲ್ಪ ಅಡೆತಡೆಯಾಗಿದೆ. ಕೃಷ್ಣಾ ನದಿ ನೀರು ಬಳಕೆಗಾಗಿ ಕೇಂದ್ರ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.
ಕೃಷ್ಣಾ ನದಿ ನೀರಿನ ಸದ್ಭಳಕೆಗಿರುವ ಕಾನೂನು ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಕಾನೂನು ತಜ್ಞರು, ವಕೀಲರ ಜತೆ ಚರ್ಚಿಸಲಾಗಿದೆ ಎಂದರು.
ಆಲಮಟ್ಟಿ ಜಲಾಶಯವನ್ನು 519.6 ಮೀ. ನಿಂದ 524.256 ಮೀ. ವರೆಗೆ ಹಂತ ಹಂತವಾಗಿ ಏರಿಸಬೇಕೆನ್ನುವ ಪ್ರಸ್ತಾವ ಸರ್ಕಾರದ ಮುಂದಿದೆ. ಮೊದಲು ಯುಕೆಪಿ ಎರಡನೇ ನ್ಯಾಯಾಧೀಕರಣದ ತೀರ್ಪಿನ ಗೆಜೆಟ್ ನೋಟಿಫಿಕೇಷನ್ ಜಾರಿಗೊಳಿಸುವತ್ತ ಗಮನಹರಿಸಲಾಗುವುದು ಎಂದರು.