ರಾಯಚೂರು: ಜಿಲ್ಲೆಯಲ್ಲಿ ವಿವಿಧೆಡೆ ಕ್ವಾರಂಟೈನ್ ಮಾಡಿರುವ ಕೂಲಿ ಕಾರ್ಮಿಕರಿಗೆ ಸರಿಯಾದ ಸೌಲಭ್ಯಗಳನ್ನ ನೀಡುವಲ್ಲಿ ಅಧಿಕಾರಿಗಳು ಎಡವಿದ್ದಾರೆ. ಹೀಗಾಗಿ ಸರ್ಕಾರಿ ಕ್ವಾರಂಟೈನ್ ನಲ್ಲಿದ್ದವರು ಹೊರಗಡೆ ಓಡಾಡುತ್ತಿದ್ದಾರೆ.
ರಾಯಚೂರಿನ ಬೋಳಮಾನದೊಡ್ಡಿ ರಸ್ತೆಯಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ವಿವಿಧೆಡೆಯಿಂದ ಬಂದಿರುವ ಕೂಲಿ ಕಾರ್ಮಿಕರನ್ನು ಇರಿಸಲಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಮೂಲಭೂತ ಕೊರತೆ ಹಿನ್ನೆಲೆ ಕಾರ್ಮಿಕರು ಹೊರಗೆ ಬರುತ್ತಿದ್ದು, ಸುತ್ತಮುತ್ತಲ ಮನೆಗಳ ನಿವಾಸಿಗಳು ಆತಂಕಗೊಂಡಿದ್ದಾರೆ.
ಕ್ವಾರಂಟೈನ್ ಕೇಂದ್ರದ ಅಕ್ಕ ಪಕ್ಕದ ಅಂಗಡಿಗಳಲ್ಲಿ ಸಾಬೂನು, ಬಿಸ್ಕೆಟ್, ನೀರಿನ ಬಾಟಲ್ ಸೇರಿದಂತೆ ವಿವಿಧ ವಸ್ತುಗಳ ಖರೀದಿಸಲು ಕೂಲಿ ಕಾರ್ಮಿಕರು ಹೊರಗಡೆ ಬರುತ್ತಿದ್ದಾರೆ. ಮೂರು ದಿನಗಳಿಂದ ಇಲ್ಲಿ ವಾಸವಾಗಿರುವ ವಲಸೆ ಕಾರ್ಮಿಕರು ಸಿಕ್ಕಸಿಕ್ಕಲ್ಲೆಲ್ಲಾ ಓಡಾಡುತ್ತಿದ್ದಾರೆ. ಕ್ವಾರಂಟೈನ್ ಇದ್ದವರು ಹೊರಗಡೆ ತಿರುಗಾಡುತ್ತಿರುವ ಹಿನ್ನೆಲೆ ಬಡಾವಣೆ ನಾಗರಿಕರಲ್ಲಿ ಆತಂಕ ಹೆಚ್ಚಾಗಿದ್ದು, ಅಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಹೀಗಾಗಿ ಕ್ವಾರಂಟೈನ್ ನಲ್ಲಿದ್ದವರು ಹೊರಗೆ ಬಾರದಂತೆ ನಿಗಾ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಲಿಂಗಸುಗೂರಿನ ದೇವರಭೂಪುರ ಗ್ರಾಮದಲ್ಲಿ ಕ್ವಾರಂಟೈನ್ ನಲ್ಲಿರುವವರಿಗೆ ಊಟ ನೀರು ಕೊಡದೆ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಇಲ್ಲಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 23 ಜನರನ್ನ ನಿನ್ನೆ ರಾತ್ರಿಯಿಂದ ಕ್ವಾರಂಟೈನ್ ಮಾಡಲಾಗಿದೆ. ಮಹಾರಾಷ್ಟ್ರದ ಪೂನಾದಿಂದ ಬಂದಿರುವ 23 ಜನರಿದ್ದು ಅವರಲ್ಲಿ 13 ಮಕ್ಕಳಿದ್ದಾರೆ. ರಾತ್ರಿ ತಡವಾಗಿದ್ದಕ್ಕೆ ಊಟ ನೀಡಿಲ್ಲ, ಬೆಳಿಗ್ಗೆಯೂ ಊಟ, ನೀರಿಲ್ಲದೆ ಕಾರ್ಮಿಕರು ಪರದಾಡಿದ್ದಾರೆ. ಶಾಲೆ ಬಳಿ ಸುಳಿಯದ ಅಧಿಕಾರಿಗಳು ಗ್ರಾಮಸ್ಥರ ದೂರು ಹಾಗೂ ಆಕ್ರೋಶದ ಬಳಿಕ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಕಾರ್ಮಿಕರೆಲ್ಲ ಲಿಂಗಸುಗೂರು ತಾಲೂಕಿನ ಪರಾಂಪೂರ ತಾಂಡಾ ನಿವಾಸಿಗಳಾಗಿದ್ದಾರೆ