ರಾಯಚೂರು: ಗ್ರೀನ್ ಝೋನ್‍ನಲ್ಲಿರುವ ರಾಯಚೂರು ಜಿಲ್ಲೆಯಲ್ಲಿ ನಾಳೆಯಿಂದ ವ್ಯಾಪಾರ ವಹಿವಾಟುಗಳು ಆರಂಭವಾಗಲಿವೆ. ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡಬಹುದು ಅಂತ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲೆ ಗ್ರೀನ್ ಝೋನ್ ಪಟ್ಟಿಯಲ್ಲಿ ಇರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲಿಕೆಯಾಗಿದ್ದು, ಬುಧವಾರದಿಂದ ಜಿಲ್ಲೆಯಾದ್ಯಂತ ವ್ಯಾಪಾರ- ವಹಿವಾಟು ಶುರುವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿರುವ ಕಂಪನಿ, ಕೈಗಾರಿಕೆಗಳನ್ನ ಆರಂಭಿಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕಂಪನಿ ಆರಂಭಿಸಲು ಸೂಚಿಸಲಾಗಿದೆ. ಜೊತೆಗೆ ಬೇರೆ ಕಡೆಗಳಿಂದ ಸಿಬ್ಬಂದಿ ಬರಬಾರದು ಅಂತ ಕಂಪನಿಯಿಂದ ಮುಚ್ಚಳಿಕೆ ಬರೆಸಿಕೊಂಡು ಆರಂಭಿಸಲು ಅನುಮತಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಹೋಟೆಲ್ ಗಳಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ ನೀಡಲಾಗಿದ್ದು, ಹೇರ್ ಕಟಿಂಗ್ ಶಾಪ್‍ಗಳು, ಪಾರ್ಲರ್ ಶಾಪ್‍ಗಳು ತೆರೆಯುವಂತಿಲ್ಲ. ಬಟ್ಟೆ ಅಂಗಡಿ, ಕಿರಾಣಿ ಅಂಗಡಿ ಇತರೆ ಅತ್ಯವಶ್ಯಕ ವಸ್ತುಗಳ ಅಂಗಡಿಗಳು ಓಪನ್ ಮಾಡಲು ಅವಕಾಶ ನೀಡಲಾಗಿದೆ. ಮನೆಯಿಂದ ಅವಶ್ಯಕತೆ ಇದ್ದವರು ಮಾತ್ರ ಹೊರಬರಬೇಕು. ಮಾಸ್ಕ್ ಧರಿಸಿಕೊಂಡೇ ಹೊರಬರಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕೇಸ್ ಹಾಕಲಾಗುವುದು ಎಂದು ಆರ್.ವೆಂಕಟೇಶ್ ಕುಮಾರ್ ಹೇಳಿದ್ದಾರೆ.