ಬೆಂಗಳೂರು:ಮನೆಯಲ್ಲಿಯೇ ಡ್ರಗ್ಸ್ (ಮಾದಕವಸ್ತು) ತಯಾರಿ ಮಾಡಿ ನ್ಯೂಜಿಲೆಂಡ್ ಸೇರಿ ವಿದೇಶಗಳಿಗೆ ಸರಬರಾಜು ಮಾಡುತ್ತಿದ್ದ ಜಾಲವೊಂದನ್ನು ಬಯಲಿಗೆಳೆಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಜಾಲದಲ್ಲಿ ಭಾಗಿಯಾಗಿದ್ದ ನೈಜೀರಿಯಾ ಮೂಲದ ಡೇವಿಡ್ ಜೊಹೊ ಮಲ್ವೆ ಎಂಬಾತನನ್ನು ಬಂಧಿಸಿರುವ ಸಿಸಿಬಿ ಮಾದಕವಸ್ತು ನಿಗ್ರಹ ಘಟಕ ಆರೋಪಿ ಬಳಿಯಿಂದ ಐದು ಕೋಟಿ ರೂ. ಮೌಲ್ಯದ ಕ್ರಿಸ್ಟೆಲ್, ಎಂಡಿಎಂಎ ಡ್ರಗ್ಸ್, ಹಾಗೂ ಈ ಡ್ರಗ್ಸ್ ತಯಾರಿಕೆಗೆ ಬಳಸಲಾಗುತ್ತಿದ್ದ ರಸಾಯನಿಕ ವಸ್ತುಗಳು ಹಾಗೂ ಇತರೆ ಪರಿಕರಗಳನ್ನು ಜಪ್ತಿ ಮಾಡಿಕೊಂಡಿದೆ.
ಆರೋಪಿ ಡೇವಿಡ್ ಹಾಗೂ ಆತನ ತಂಡ, ಸ್ಥಳೀಯ ರಸಾಯನಿಕ ಅಂಗಡಿಗಳಲ್ಲಿ ಡ್ರಗ್ಸ್ ತಯಾರಿಕೆಗೆ ಬೇಕಾದ ರಸಾಯನಿಕಗಳನ್ನು ಆನ್‌ಲೈನ್ ಮೂಲಕ ಖರೀದಿ ಮಾಡುತ್ತಿದ್ದರು. ಎಂಡಿಎಂಎ ಕ್ರಿಸ್ಟೆಲ್ ತಯಾರಿಸಿ ಅದನ್ನು ಶೂ ಲೇಸ್‌ಗಳಲ್ಲಿ ಬಚ್ಚಿಟ್ಟು ವಿದೇಶಗಳಿಗೆ ಪಾರ್ಸೆಲ್ ಕಳಿಸಿಕೊಡುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಈ ಕುರಿತು ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದ ಚಾಮುಂಡಿ ಲೇಔಟ್‌ನ ಮನೆಯೊಂದರಲ್ಲಿ ಡ್ರಗ್ಸ್ ತಯಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿದ ಎಸಿಪಿ ಗೌತಮ್ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಆರೋಪಿ ಡೇವಿಡ್‌ನನ್ನು ಬಂಧಿಸಿದೆ. ಜೊತೆಗೆ, ಡ್ರಗ್ಸ್ ಹಾಗೂ ಡ್ರಗ್ಸ್ ತಯಾರಿಕೆಗೆ ಬಳಸುತ್ತಿದ್ದ ಪರಿಕರಗಳನ್ನು ಜಪ್ತಿ ಮಾಡಿಕೊಂಡಿದೆ.
ತನಿಖಾ ತಂಡದಲ್ಲಿ ಡಿಸಿಪಿ ಬಿ.ಎಸ್ ಅಂಗಡಿ, ಮಾದಕ ವಸ್ತು ನಿಗ್ರಹ ದಳದ ಎಸಿಪಿ ಕೆ.ಸಿ ಗೌತಮ್, ಇನ್ಸ್‌ಪೆಕ್ಟರ್ ಆರ್ ವಿರೂಪಾಕ್ಷಸ್ವಾಮಿ, ಪಿಎಸ್‌ಐ ಪ್ರೇಮ್‌ಕುಮಾರ್, ಸಿಬ್ಬಂದಿಯಾದ ಶಶಿಧರ್, ಎಂ.ವಿ ಶ್ರೀನಿವಾಸ, ವಿ. ಶ್ರೀನಿವಾಸ, ಅರುಣ್, ಎಸ್.ಟಿ ಕುಮಾರ ಪಾಲ್ಗೊಂಡಿದ್ದರು.
ಮಾದಕವಸ್ತು ನಿಗ್ರಹ ದಳದ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಹಾಗೂ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.