ಹಾಸನ: ಅಪಘಾತದಿಂದ ಮೆದುಳು ನಿಷ್ಕ್ರಿಯವಾಗಿದ್ದ ಮಗಳ ಅಂಗಾಂಗ ದಾನ ಮಾಡಿ ಪೋಷಕರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಅರಸೀಕೆರೆ ತಾಲ್ಲೂಕಿನ, ಕಾರೇಹಳ್ಳಿ ಗ್ರಾಮದ ನಿವಾಸಿ ಮೋನಿಕಾ (18) ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಏಪ್ರಿಲ್ 5 ರಂದು ಸಂಜೆ ಸುಮಾರು 6.30 ರ ಸಮಯದಲ್ಲಿ ಬಿ.ಹೆಚ್ ರಸ್ತೆಯ ಎಪಿಎಂಸಿ ಮಾರುಕಟ್ಟೆ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.
ತೀವ್ರ ಪೆಟ್ಟಾಗಿದ್ದರಿಂದ ಯುವತಿ ಸ್ಥಿತಿ ಗಂಭೀರವಾಗಿದ್ದು ನಂತರ ಮೆದುಳು ನಿಷ್ಕ್ರಿಯವಾಗಿತ್ತು. ವೈದ್ಯರು ಮೋನಿಕಾಳ ಪೋಷಕರಿಗೆ ಈ ವಿಷಯ ತಿಳಿಸಿದ್ದಾರೆ. ಪೋಷಕರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ನಂತರ ಮಗಳ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದು, 5 ಜೀವಗಳಿಗೆ ಹೊಸ ಬೆಳಕು ನೀಡಿದ್ದಾರೆ.
ನೂರಾರು ಆಸೆ, ಕನಸುಗಳೊಂದಿಗೆ ಬದುಕು ಸಾಗಿಸಬೇಕಾಗಿದ್ದ ಯುವತಿ, ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ. ತನ್ನ ಜೀವನದ ಕೊನೆಯ ಕ್ಷಣದಲ್ಲಿಯೇ ಮಾನವೀಯತೆಯ ಮಹತ್ತರ ಸಂದೇಶವೊಂದನ್ನು ಬಿಟ್ಟು ಹೋಗುವ ಮೂಲಕ ಮೋನಿಕಾ ಅನೇಕ ಹೃದಯಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾಳೆ.
Laxmi News 24×7