Breaking News

ನಿಪ್ಪಾಣಿ: ಸರ್ಕಾರಿ ಕಚೇರಿಗಳಿಗೆ ಬೇಕಿದೆ ಸ್ವಂತ ಕಟ್ಟಡ!

Spread the love

ನಿಪ್ಪಾಣಿ: ಗಡಿಭಾಗದ ನಿಪ್ಪಾಣಿಯು ತಾಲ್ಲೂಕು ಕೇಂದ್ರವಾಗಿ ರಚನೆಯಾಗಿ ಎಂಟು ವರ್ಷವಾಗಿದೆ. ಆದರೆ, ಕೆಲವೇ ಇಲಾಖೆಗಳ ಕಚೇರಿಗಳಷ್ಟೇ ಕಾರ್ಯಾರಂಭ ಮಾಡಿವೆ. ವಿವಿಧ ಇಲಾಖೆಗಳ ಕಚೇರಿಗಳು ಇನ್ನೂ ಬಾರದ್ದರಿಂದ ಜನರ ಪರದಾಟ ಮುಂದುವರಿದಿದೆ. ಸರ್ಕಾರಿ ಕೆಲಸಗಳು, ದಾಖಲೆಗಾಗಿ ಹಳೇ ತಾಲ್ಲೂಕಾದ ಚಿಕ್ಕೋಡಿಗೆ ಅಲೆದಾಡಬೇಕಿದೆ.

ಈಗ ನಿಪ್ಪಾಣಿಯಲ್ಲಿ ಕೆಲಸ ಮಾಡುತ್ತಿರುವ ವಿವಿಧ ಇಲಾಖೆಗಳ ಕಚೇರಿಗಳಿಗೆ ಸ್ವಂತ ಕಟ್ಟಡ ಇಲ್ಲದ್ದರಿಂದ ಬಾಡಿಗೆ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಹೇಳಿಕೊಳ್ಳುವಂಥ ಸೌಕರ್ಯಗಳಿಲ್ಲ.

ಮೂರು ದಶಕಗಳಿಂದ ಪ್ರವಾಸಿ ಮಂದಿರದಲ್ಲಿದ್ದ ಉಪ ತಹಶೀಲ್ದಾರ್ ಕಚೇರಿಯನ್ನು ತಹಶೀಲ್ದಾರ್‌ ಕಚೇರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಸ್ವಂತ ಕಟ್ಟಡಕ್ಕೆ ಜಾಗ ಸಿಗದ ಕಾರಣ ಇನ್ನೂ ಪ್ರವಾಸಿ ಮಂದಿರದಲ್ಲೇ ಅದು ಕಾರ್ಯನಿರ್ವಹಿಸುತ್ತಿದೆ.

60 ವರ್ಷಗಳ ಹಿಂದೆ ಆರಂಭಗೊಂಡ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಪ್ರತ್ಯೇಕ ಕಟ್ಟಡವಿತ್ತು. ಆದರೆ, ಆ ಕಟ್ಟಡವನ್ನು ಮತ್ತೊಂದು ಸರ್ಕಾರಿ ಕಚೇರಿಗೆ ನೀಡಲಾಯಿತು. ಹಾಗಾಗಿ ಅದು ಈಗ ಲೋಕಮಾನ್ಯ ತಿಲಕ ಉದ್ಯಾನದ ಹಿಂಭಾಗದಲ್ಲಿರುವ ಹಳೆಯ ಶಾಲೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಟ್ಟಡದ ಚಾವಣಿ, ಗೋಡೆ ಕುಸಿಯುತ್ತಿದ್ದು, ಆತಂಕದಲ್ಲೇ ನೌಕರರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಇಲಾಖೆ ಕಚೇರಿಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ.

ತಾಲ್ಲೂಕು ಆಸ್ಪತ್ರೆಯಾಗುವುದು ಯಾವಾಗ?:
ನಿಪ್ಪಾಣಿಯಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ನಗರ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕಿದೆ. ರೋಗಿಗಳ ಸಂಖ್ಯೆಗೆ ತಕ್ಕಂತೆ ಆರೋಗ್ಯ ಸೇವೆಗಳನ್ನು ಹೆಚ್ಚಿಸಬೇಕಿದೆ.

ನಗರ ಹಾಗೂ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳು ಹಾದುಹೋಗಿವೆ. ಆದರೆ, ಅಪಘಾತದಲ್ಲಿ ಗಾಯಗೊಂಡವರಿಗೆ ತ್ವರಿತವಾಗಿ ಚಿಕಿತ್ಸೆ ಕೊಡಿಸಲು ನಿಪ್ಪಾಣಿಯಲ್ಲಿ ಟ್ರಾಮಾಕೇರ್‌ ಸೆಂಟರ್‌ ಇಲ್ಲ. ಹಾಗಾಗಿ ಅಪಘಾತಕ್ಕೀಡಾದವರನ್ನು ಚಿಕಿತ್ಸೆಗಾಗಿ ಕೊಲ್ಹಾಪುರ ಅಥವಾ ಬೆಳಗಾವಿಯ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ನಿಪ್ಪಾಣಿಯಲ್ಲಿ ತುರ್ತಾಗಿ ಟ್ರಾಮಾಕೇರ್‌ ಸೆಂಟರ್‌ ಆರಂಭಿಸಬೇಕಿದೆ.

ಸಂಜಯ ಸೂರ್ಯವಂಶಿ ಸಾಮಾಜಿಕ ಕಾರ್ಯಕರ್ತಜಿಲ್ಲಾ ಕೇಂದ್ರವಾಗುವ ಅರ್ಹತೆ ಹೊಂದಿರುವ ನಿಪ್ಪಾಣಿಗೆ ಅಗತ್ಯವಿರುವ ಸೌಲಭ್ಯಗಳನ್ನು ಈ ಬಜೆಟ್‌ನಲ್ಲಿ ಸರ್ಕಾರ ಘೋಷಿಸಬೇಕು

ಬೇಕಿದೆ ಟೆಕ್ಸ್‌ಟೈಲ್‌ ಕ್ಲಸ್ಟರ್‌

ನಿಪ್ಪಾಣಿಯಲ್ಲಿ ಟೆಕ್ಸ್‌ಟೈಲ್‌ ಮತ್ತು ಬೆಳ್ಳಿ ಕ್ಲಸ್ಟರ್‌ ಆರಂಭಿಸಬೇಕು ಎಂಬ ಬೇಡಿಕೆ ದಶಕಗಳಿಂದಲೂ ಇದೆ. ಆದರೆ ಇಂದಿಗೂ ಬೇಡಿಕೆ ಈಡೇರದಿರುವುದು ಸ್ಥಳೀಯರ ನಿರಾಸೆಗೆ ಕಾರಣವಾಗಿದೆ. ಇಲ್ಲಿ ಪಾದರಕ್ಷೆ ಕ್ಲಸ್ಟರ್‌ ಆರಂಭಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದವು. ಆದರೆ ಈಗ ಆ ಯೋಜನೆಯೂ ಬಹುತೇಕ ಕುಂಠಿತಗೊಂಡಿದೆ.


Spread the love

About Laxminews 24x7

Check Also

ನಿಪ್ಪಾಣಿ ನಗರಸಭೆ: ಮತ್ತೆ ಬಿಜೆಪಿ ಮೇಲುಗೈ

Spread the love ನಿಪ್ಪಾಣಿ: ಸ್ಥಳೀಯ ನಗರಸಭೆಯ ಎರಡನೇಯ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆದು ಈ ಅವಧಿಯಲ್ಲೂ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ