ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲ ತಯಾರಿ ನಡೆಯುತ್ತಿದೆ. ಈ ಬಾರಿ 74 ನೇ ಸ್ವಾತಂತ್ರ್ಯ ದಿನವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುವುದು. 1947, ಆಗಸ್ಟ್ 15 ರಂದು 200 ವರ್ಷಗಳ ಬ್ರಿಟಿಷ್ ಗುಲಾಮಗಿರಿಯಿಂದ ಭಾರತೀಯರಿಗೆ ಸ್ವಾತಂತ್ರ್ಯ ಸಿಕ್ಕಿತ್ತು. ಬ್ರಿಟಿಷರ ವಿರುದ್ಧ ಹೋರಾಡಲು, ದೇಶದ ಜನರನ್ನು ಒಂದು ಮಾಡಲು ಧ್ವಜದ ಅಗತ್ಯವುಂಟಾಗಿತ್ತು. ಈ ಧ್ವಜ ಈಗ ರಾಷ್ಟ್ರೀಯತೆಯ ಸಂಕೇತವಾಗಿದೆ.
ದೇಶದ ಏಕತೆ, ಸಮಗ್ರತೆ ಮತ್ತು ರಾಷ್ಟ್ರದ ಗುರುತು ಧ್ವಜವಾಗಿದೆ. ಇಡೀ ರಾಷ್ಟ್ರವನ್ನು ಒಂದುಗೂಡಿಸುವ ಶಕ್ತಿ ಇದಕ್ಕಿದೆ. ನಮ್ಮ ಭಾರತ ದೇಶಕ್ಕೂ ಒಂದು ರಾಷ್ಟ್ರ ಧ್ವಜವಿದೆ. ಭಾರತ ವಿವಿಧತೆಯಲ್ಲಿ ಏಕತೆ ಸಾರುವ ದೇಶ. ಇಲ್ಲಿ ಸಾಕಷ್ಟು ಜಾತಿ, ಧರ್ಮ, ಸಂಸ್ಕೃತಿ, ಸಂಪ್ರದಾಯದ ಜನರಿದ್ದಾರೆ. ವಿವಿಧತೆ ಅನೇಕ ಬಾರಿ ಗಲಾಟೆಗೆ ಕಾರಣವಾಗುತ್ತದೆ.
ಆದ್ರೆ ರಾಷ್ಟ್ರ ಧ್ವಜದಡಿ ನಿಂತಾಗ ಎಲ್ಲರೂ ಎಲ್ಲವನ್ನೂ ಮರೆಯುತ್ತಾರೆ. ನಾವೆಲ್ಲ ಒಂದೇ ಎಂಬುದನ್ನು ಸಾರುತ್ತಾರೆ. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಈ ರಾಷ್ಟ್ರಧ್ವಜಕ್ಕಿದೆ.
ದೇಶದ ಮೊದಲ ರಾಷ್ಟ್ರಧ್ವಜ 1906 ರಲ್ಲಿ ರಚನೆಯಾಗಿತ್ತು. ಕೋಲ್ಕತ್ತಾದ ಬಗಾನ್ ಚೌಕ್ ನಲ್ಲಿ ಇದನ್ನು ಹಾರಿಸಲಾಗಿತ್ತು. ಕೇಸರಿ, ಹಳದಿ ಮತ್ತು ಹಸಿರು ಬಣ್ಣಗಳು ಇದ್ರಲ್ಲಿದ್ದವು. ಕಮಲದ ಹೂ ಹಾಗೂ ವಂದೇ ಮಾತರಂ ಬರೆಯಲಾಗಿತ್ತು. ನಂತ್ರ 1917ರಲ್ಲಿ ಮತ್ತೊಂದು ರಾಷ್ಟ್ರಧ್ವಜ ರಚನೆಯಾಯ್ತು. ಐದು ಕೆಂಪು, 4 ಹಸಿರು ಪಟ್ಟಿಗಳಿದ್ದವು.
1921ರಲ್ಲಿ ನಿರ್ಮಾಣವಾದ ರಾಷ್ಟ್ರ ಧ್ವಜದಲ್ಲಿ ಕೆಂಪು ಹಾಗೂ ಹಸಿರು ಎರಡೇ ಬಣ್ಣಗಳಿದ್ದವು. 1931ರಲ್ಲಿ ಈಗಿನ ರಾಷ್ಟ್ರಧ್ವಜ ರಚನೆಯಾಯ್ತು. ಆಗ ಕಾಂಗ್ರೆಸ್ ರಾಷ್ಟ್ರಧ್ವಜ ನಿರ್ಮಾಣದ ಪ್ರಸ್ತಾವನೆಯನ್ನು ಅಂಗೀಕರಿಸಿತ್ತು. ಮಹಾತ್ಮಾ ಗಾಂಧಿ ಸೂಚನೆ ಮೇರೆಗೆ ಧ್ವಜದಲ್ಲಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಕ್ಕೆ ಮಹತ್ವ ನೀಡಲಾಯ್ತು. ಮಧ್ಯೆ ಅಶೋಕ ಚಕ್ರ ಇರಿಸಲಾಯ್ತು. ಧ್ವಜವನ್ನು ರಾಷ್ಟ್ರೀಯ ಧ್ವಜವಾಗಿ ಅಳವಡಿಸಿಕೊಳ್ಳಲು ಡಾ. ರಾಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಸಮಿತಿಯು ರಚನೆಯಾಯಿತು. ಸಂವಿಧಾನದಲ್ಲಿ, ಜುಲೈ 22, 1947 ರಂದು ರಾಷ್ಟ್ರೀಯ ಧ್ವಜಕ್ಕೆ ಅಂಗೀಕಾರ ಸಿಕ್ತು.
ಸಂವಿಧಾನ ಸಭೆಯಲ್ಲಿ ಅನುಮೋದನೆ ಪಡೆದ ನಂತರ, ಆಗಸ್ಟ್ 16, 1947 ರಂದು ಮೊದಲ ರಾಷ್ಟ್ರೀಯ ಧ್ವಜವನ್ನು ಕೆಂಪು ಕೋಟೆ ಮೇಲೆ ಹಾರಿಸಲಾಯಿತು. ಧ್ವಜವನ್ನು ಪಂಡಿತ್ ಜವಾಹರಲಾಲ್ ನೆಹರು ಹಾರಿಸಿದರು. ರಾಷ್ಟ್ರದ ಮೊದಲ ಧ್ವಜ ಹೊರತುಪಡಿಸಿ ಯಾವುದೇ ಇತರ ಸ್ಥಳದಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸುವುದು ಅನುಮತಿ ಇಲ್ಲ. ನಂತರ, ಜನವರಿ 26, 2002 ರಂದು, ಫ್ಲಾಗ್ ಕೋಡ್ ಅನ್ನು ತಿದ್ದುಪಡಿ ಮಾಡಲಾಯಿತು. ನಂತ್ರ ಶಾಲೆ, ಕಚೇರಿ, ಮನೆಯಲ್ಲಿ ನಿಯಮದಂತೆ ಧ್ವಜ ಹಾರಿಸಲು ಅನುಮತಿ ಸಿಕ್ತು.