ಮೈಸೂರು: ನಂಜನಗೂಡು ಮೂಲಕ ದೇಶವ್ಯಾಪಿ ಸುದ್ದಿಯಾಗಿದ್ದ ಮೈಸೂರು ಈಗ ಕೊರೊನಾ ಮುಕ್ತ ಜಿಲ್ಲೆಯಾಗಿದೆ. ಪತ್ತೆಯಾಗಿದ್ದ 90 ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಎಲ್ಲರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಅತೀವ ಟೆನ್ಷನ್ ನಲ್ಲಿದ್ದ ಮೈಸೂರು ರಿಲ್ಯಾಕ್ಸ್ ಮೂಡ್ ಗೆ ಬಂದಿದೆ.
ಇಬ್ಬರು ಕೊರೊನಾ ಸೋಂಕಿತರು ಇಂದು ಡಿಜ್ಚಾರ್ಜ್ ಆಗಿದ್ದಾರೆ. ಆ ಮೂಲಕ ನಾವು ಕೊರೊನಾ ಮುಕ್ತ ಮೈಸೂರು ಆಗಿದ್ದೇವೆ. ಮಾರ್ಚ್ 21 ರಿಂದ ಇಲ್ಲಿಯವರೆಗೆ ಇದ್ದ ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇವತ್ತಿನ ಮಟ್ಟಿಗೆ ಮೈಸೂರಿನಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಇಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧಿಕೃತವಾಗಿ ತಿಳಿಸಿದ್ದಾರೆ.
ಹೆಚ್ಚು ಕಡಿಮೆ 52 ದಿನ ಮೈಸೂರು ಆತಂಕದಲ್ಲೇ ಇತ್ತು. ಒಂದು ಕಡೆ ಜ್ಯೂಬಿಲಿಯೆಂಟ್ ಕಾರ್ಖಾನೆ ಒಳಗೆ ಸ್ಫೋಟವಾದ ಸೋಂಕು ಮತ್ತೊಂದು ಕಡೆ ತಬ್ಲೀಘಿ ಜಮಾತ್‍ಗೆ ಹೋಗಿ ಬಂದವರಿಗೆ ಅಂಟಿದ ಸೋಂಕು. ಹೀಗಾಗಿ, ಮೈಸೂರಲ್ಲಿ 90 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ಇದು ಬೆಳೆಯಯವ ಆತಂಕವೂ ಇತ್ತು. ಆದರೆ ಮೈಸೂರು ಜಿಲ್ಲಾಡಳಿತದ ಅವಿರತ ಶ್ರಮ. ಅವರ ಅದ್ಭುತವಾದ ಪ್ಲಾನ್ ಮತ್ತು ಟೀಂ ವರ್ಕ್ ನಿಂದ ಸೋಂಕು ಹರಡುವಿಕೆ ನಿಂತಿದೆ.
ಜನರು ಕೂಡ ಜಿಲ್ಲಾಡಳಿತದ ಎಲ್ಲಾ ನಿಬಂಧನೆಗಳನ್ನು ಸರಿಯಾಗಿ ಪಾಲಿಸಿದ ಫಲವಾಗಿ ಮೈಸೂರು ದೊಡ್ಡ ಅಪಾಯದಿಂದ ಪಾರಾಗಿದೆ. ಈ ಮೂಲಕ ಇಡೀ ರಾಜ್ಯದಲ್ಲೇ ಮೊದಲ ಕೊರೊನಾ ಮುಕ್ತ ನಗರ ಎನಿಸಿಕೊಂಡಿದೆ.
ನಂಜನಗೂಡಿಗೆ ರಿಲೀಫ್:
ಮೈಸೂರು ಕೊರೊನಾ ಸೋಂಕು ಮುಕ್ತವಾದ ಬೆನ್ನಲ್ಲೇ ಕ್ಲಸ್ಟರ್ ಆಗಿದ್ದ ನಂಜನಗೂಡಿಗೆ ಬಿಗ್ ರಿಲೀಫ್ ಸಿಕ್ಕಿದೆ. ನಂಜನಗೂಡು ಪಟ್ಟಣವನ್ನು ಕ್ಲಸ್ಟರ್ ಕಂಟೈನ್ಮೆಂಟ್ ಘಟಕದಿಂದ ಮುಕ್ತಿ ನೀಡಲಾಗಿದೆ. ನಂಜನಗೂಡಿನಲ್ಲಿ ವಾಹನ ಓಡಾಟಕ್ಕೆ ಅವಕಾಶ ನೀಡಲಾಗಿದೆ. ದ್ವಿಚಕ್ರ ವಾಹನದಲ್ಲಿ ಓರ್ವ ಓಡಾಡಬಹುದು, ನಾಲ್ಕು ಚಕ್ರ ವಾಹನದಲ್ಲಿ ಇಬ್ಬರು ಓಡಾಡುವ ಅವಕಾಶ ಕಲ್ಪಿಸಲಾಗಿದೆ.
ನಂಜನಗೂಡಿನ ಎಲ್ಲಾ ಕೈಗಾರಿಕಾ ಚಟುವಟಿಕೆಗೆ ಅನುಮತಿ ನೀಡಲಾಗಿದ್ದು ನಂಜನಗೂಡು ಪಟ್ಟಣದಲ್ಲಿರುವ ಕಾರ್ಮಿಕರನ್ನು ಬಳಸಿಕೊಂಡು ಕಟ್ಟಡ ಕಾಮಗಾರಿ ಮಾಡಬಹುದಾಗಿದೆ. ಆದರೆ ರಾಜ್ಯ ವ್ಯಾಪ್ತಿಯ ನಿಬಂಧನೆಗಳು ಇಲ್ಲಿಗೂ ಒಳಪಡುತ್ತವೆ.
ಒಟ್ಟಾರೆ ಮೈಸೂರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಬೆಟ್ಟದಂತೆ ಬಂದಿದ್ದ ಅಪಾಯವನ್ನು ಮೈಸೂರಿನ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಯಾವ ತೊಂದರೆ ಆಗದಂತೆ ನಿವಾರಿಸಿದೆ. ಈ ಟೀಂ ಕೆಲಸಕ್ಕೆ ಇಡೀ ಮೈಸೂರು ಜಿಲ್ಲೆಯ ಜನತೆ ಕೃತಜ್ಞತೆ ಸಲ್ಲಿಸುತ್ತಿದೆ.