ಮೈಸೂರು: ನಗರದಲ್ಲಿ (ಗುರುವಾರ) ಎಲ್ಲ ರೀತಿಯ ವ್ಯಾಪಾರ ವಹಿವಾಟಿಗೆ ಮುಕ್ತ ಅವಕಾಶ ನೀಡಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆಯಿಂದ ಆದೇಶ ಹೊರಡಿಸಿದೆ.
14 ದಿನದಿಂದ ಕೊರೊನಾ ಪ್ರಕರಣಗಳು ಬಾರದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕೊರೊನಾ ಭೀತಿ ಕಡಿಮೆಯಾದ ಹಿನ್ನೆಲೆಯಲ್ಲಿ ಪಾಲಿಕೆ ಗುರುತಿಸಿದ್ದ 91 ರಸ್ತೆಗಳ ಮೇಲಿನ ನಿರ್ಬಂಧ ತೆರವು ಮಾಡಲಾಗಿದೆ. ನಗರದ 91 ರಸ್ತೆಗಳಲ್ಲಿ ಅಗತ್ಯ ವಸ್ತುಗಳ ಮಾರಾಟ ಮಾತ್ರ ಅವಕಾಶ ನೀಡಲಾಗಿತ್ತು. ಗುರುವಾರದಿಂದ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದ್ದು, ವ್ಯಾಪಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಆದೇಶಿಸಿದ್ದಾರೆ.
ಷರತ್ತುಗಳು ಅನ್ವಯ: ಪಾಲಿಕೆ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ವ್ಯಾಪಾರಕ್ಕೆ ಅವಕಾಶ ನೀಡಿದೆ. ಸಲೂನ್, ಸ್ಪಾ, ಸಿನಿಮಾ ಮಂದಿರ, ಮಾಲ್, ಧಾರ್ಮಿಕ ಕೇಂದ್ರಕ್ಕೆ ಅವಕಾಶ ಇಲ್ಲ. ಸರ್ಕಾರಿ ಸಾರಿಗೆ, ಆಟೋ, ಟ್ಯಾಕ್ಸಿ ಗಳ ಸಂಚಾರಕ್ಕೂ ಅವಕಾಶ ಇಲ್ಲ. ಹೋಟೆಲ್‍ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶ ನೀಡಲಾಗಿದ್ದು, ಕೇಂದ್ರ ಸರ್ಕಾರದ ಎಲ್ಲಾ ಲಾಕ್‍ಡೌನ್ ನಿರ್ಬಂಧಗಳು ಈಗಲೂ ಅನ್ವಯವಾಗಲಿದೆ. ಮೈಸೂರು ಮಹಾನಗರ ಪಾಲಿಕೆ ಕೇವಲ ವಾಣಿಜ್ಯ ರಸ್ತೆಗಳ ಮೇಲಿನ ನಿರ್ಬಂಧ ತೆರವು ಮಾಡಿದೆ.
ಮೇ 3ರಿಂದ ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆ ನೀಡಿದ್ದರೂ, ಮೈಸೂರಿನ ಜನತೆಗೆ ಯಾವುದೇ ವಿನಾಯ್ತಿ ನೀಡಿರಲಿಲ್ಲ. ಈ ಕುರಿತು ಮೇ 3ರಂದು ಮಹಾನಗರ ಪಾಲಿಕೆ ಆದೇಶ ಹೊರಡಿಸಿತ್ತು. ಇದೀಗ ಮೇ 3ರ ಆದೇಶವನ್ನು ವಾಪಸ್ ಪಡೆಯಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 90 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈಗಾಗಲೇ 86 ಜನರು ಗುಣಮುಖರಾಗಿ ಮನೆ ತಲುಪಿದ್ದಾರೆ. ಇಂದು ಸಂಜೆ ರೋಗಿ 395 ಮತ್ತು 204 ಸಂಪೂರ್ಣ ಗುಣಮುಖವಾದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಮಾಹಿತಿ ನೀಡಿದ್ದಾರೆ.