ಮೈಸೂರು: ಕೊರೊನಾ ಹಿನ್ನೆಲೆಯ ಲಾಕ್‍ಡೌನ್ 5.0 ಸಡಿಲಿಕೆಯಾಗಿದ್ದು, ಸೋಮವಾರದಿಂದ ದೇವಸ್ಥಾನ, ಮಸೀದಿ ಮತ್ತು ಚರ್ಚ್ ತೆರೆಯುತ್ತಿವೆ. ಇದೀಗ ಮೈಸೂರಿನ ಪ್ರಮುಖ ಪ್ರವಾಸಿ ಕೇಂದ್ರವಾದ ಅರಮನೆ ಪುನರಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಂದರೆ ನಾಳೆಯಿಂದ ವಿಶ್ವವಿಖ್ಯಾತ ಮೈಸೂರು ಅರಮನೆ ರೀ ಓಪನ್ ಆಗಲಿದೆ.
ಸೋಮವಾರದಿಂದ ಪ್ರವಾಸಿಗ ವೀಕ್ಷಣೆಗೆ ಮೈಸೂರು ಅರಮನೆ ಲಭ್ಯವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸೋದು ಕಡ್ಡಾಯವಾಗಿದೆ. ಇನ್ನೂ 10 ವರ್ಷದೋಳಗಿನ ಮಕ್ಕಳು ಹಾಗೂ 65 ವರ್ಷದ ಮೇಲ್ಪಟ ವೃದ್ಧರು ಅರಮನೆಗೆ ಬರುವುದನ್ನು ನಿಷೇಧಿಸಲಾಗಿದೆ.
ಪ್ರವಾಸಿಗರ ಲಗೇಜ್‍ಗೆ ಸ್ಯಾನಿಟೈಸರ್ ಮಾಡಿ ಅರಮನೆಗೆ ಎಂಟ್ರಿ ನೀಡಲಾಗುತ್ತದೆ. ಒಂದು ಗಂಟೆಗೆ ಸುಮಾರು 350 ಮಂದಿಗೆ ಅರಮನೆ ವೀಕ್ಷಣೆಗೆ ಅವಕಾಶವಿದ್ದು, 6 ಅಡಿ ಅಂತರದಲ್ಲಿ ಅರಮನೆ ನೋಡಲು ಅವಕಾಶವಿದೆ. ಪ್ರವಾಸಿಗರು ಅವರೇ ನೀರಿನ ಬಾಟೆಲ್ ತರಬೇಕು. ಅಲ್ಲದೆ ನೋಟ್‍ಗಳನ್ನು ಸಹ ಸ್ಯಾನಿಟೈಸರ್ ಮಾಡಲಾಗುತ್ತದೆ ಈ ಮೂಲಕ ಕೇಂದ್ರದ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕರಾದ ಸುಬ್ರಹ್ಮಣ್ಯ ಅವರು, ಒಂದು ದಿನ ಸುಮಾರು 3 ರಿಂದ 4 ಸಾವಿರ ಪ್ರವಾಸಿಗರು ಅರಮನೆ ವೀಕ್ಷಣೆ ಮಾಡಬಹುದು. ಸರ್ಕಾರ ಸೂಚಿಸಿರುವಂತೆ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ಸದ್ಯಕ್ಕೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಇನ್ನೂ ಶನಿವಾರ ಮತ್ತು ಭಾನುವಾರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಹೀಗಾಗಿ ಸೋಮವಾರದಿಂದ ಶುಕ್ರವಾರದವರೆಗೂ ಮಾತ್ರ ಅರಮನೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಶನಿವಾರ, ಭಾನುವಾರ ಮತ್ತು ರಜಾ ದಿನಗಳಲ್ಲಿ ಅರಮನೆ ವೀಕ್ಷಣೆಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.