ಮೈಸೂರು: ಸಾಮೂಹಿಕ ಅತ್ಯಾಚಾರದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯೇ ಮೈಸೂರಿಗೆ ಬಂದು ವಾಸ್ತವ್ಯ ಹೂಡಿದ್ದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ ಸುತ್ತಾಟ, ಪೂಜೆಗಳಲ್ಲೇ ಕಾಲ ಕಳೆದರು.
ಶುಕ್ರವಾರ ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ನಂತರ, ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಸುತ್ತಾಟ ನಡೆಸಿದರು. ಅಲ್ಲಿ ಫೈರಿಂಗ್ ಸ್ಟಿಮಿಲೇಟರ್‌ನ್ನು ಉದ್ಘಾಟಿಸಿ, ತಾವೂ ಫೈರಿಂಗ್ ನಡೆಸಿ ಖುಷಿಪಟ್ಟರು. ಮಾದರಿ ಪೊಲೀಸ್ ಠಾಣೆ, ಪರೀಕ್ಷಾರ್ಥಿಗಳ ಕೊಠಡಿ, ಸಭಾಂಗಣ, ಗ್ರಂಥಾಲಯ ವೀಕ್ಷಿಸಿದರು.
ಅತ್ಯಾಚಾರ ಪ್ರಕರಣ ಹಾಗೂ ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳನ್ನು ಕುರಿತು ಅಧಿಕಾರಿಗಳೊಂದಿಗೆ ಅವರು ಸಭೆ ಆರಂಭಿಸುವ ಹೊತ್ತಿಗೆ ಮಧ್ಯಾಹ್ನ 1 ಗಂಟೆಯಾಗಿತ್ತು.
ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅತ್ಯಾಚಾರ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಲು ಆಗುವುದಿಲ್ಲ. ಹೆಚ್ಚಿನ ಸಮಯ ಬೇಕಾಗುತ್ತದೆ. ಯುವತಿಯ ಹೇಳಿಕೆ ಪಡೆದ ಬಳಿಕವೇ ತನಿಖೆಯನ್ನು ಚುರುಕುಗೊಳಿಸಲು ಸಾಧ್ಯ’ ಎಂದರು. ಸಭೆ ಬಳಿಕ ಅವರು ಘಟನೆಯ ಸ್ಥಳಕ್ಕೆ ಭೇಟಿ ನೀಡಿದ್ದರು.