ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ 21 ಗ್ರಾಮ ಪಂಚಾಯಿತಿಗಳು ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣದಲ್ಲಿ 2,83,34,944 ರೂ. ಹಣವನ್ನು ಗ್ರಾಮ ಪಂಚಾಯಿತಿ ನಿಧಿಗೆ ಜಮೆ ಮಾಡದೇ ಅಧಿಕಾರಿಗಳೇ ದುರುಪಯೋಗಪಡಿಸಿಕೊಂಡಿರುವ ಪ್ರಕರಣ ಲೋಕಾಯುಕ್ತ ತನಿಖೆಯಿಂದ ಬಹಿರಂಗೊಂಡಿದೆ.
1994-95ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಸ್ಥಳೀಯ ಲೆಕ್ಕ ಪರಿಶೋಧನಾ ವರದಿಗಳ ಪ್ರಕಾರ ಗ್ರಾಮ ಪಂಚಾಯಿತಿಗಳು ಜನರಿಂದ ಪಡೆದ ತೆರಿಗೆ ಹಣವನ್ನು ಗ್ರಾಮ ಪಂಚಾಯಿತಿ ನಿಧಿಗೆ ಜಮಾ ಮಾಡದಿರುವುದು ಕಂಡುಬಂದಿದೆ. ಈ ಹಣವನ್ನು ಅಧಿಕಾರಿಗಳೇ ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ನಷ್ಟ ಉಂಟುಮಾಡಿರುವುದಾಗಿ ಲೋಕಾಯುಕ್ತ ತನಿಖಾ ತಂಡ ವರದಿಯಲ್ಲಿ ತಿಳಿಸಿದೆ.
ಕಿರಂಗೂರು ಮೋಹನ್ಕುಮಾರ್ ಅವರು ಕಿರಂಗೂರು ಗ್ರಾಪಂನಲ್ಲಿ 2 ಎಕರೆ 33 ಗುಂಟೆ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಅನ್ಯಕ್ರಾಂತ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಅಕ್ರಮವಾಗಿ ವಸತಿ ಬಡಾವಣೆ ಉದ್ದೇಶಕ್ಕೆ ನಕಲಿ ಬಹು ವಿನ್ಯಾಸ ನಕ್ಷೆ ತಯಾರಿಸಿ ಕಿರಂಗೂರು ಗ್ರಾಪಂನಿಂದ ಇ-ಸ್ವತ್ತುಗಳನ್ನು ಕೊಟ್ಟಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದರು.
ದೂರು ಅರ್ಜಿಯಲ್ಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಲೋಕಾಯುಕ್ತ ಪೊಲೀಸರಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ತಾಪಂ ಕಾರ್ಯನಿರ್ವಹಣಾಧಿಕಾರಿ ಕಚೇರಿ, ಶ್ರೀರಂಗಪಟ್ಟಣ ತಾಲೂಕು ಕಚೇರಿ ಹಾಗೂ ಕಿರಂಗೂರು ಗ್ರಾಪಂ ಕಚೇರಿಯನ್ನು ಶೋಧನೆ ನಡೆಸಲು ವಾರೆಂಟ್ ಹೊರಡಿಸಿದ್ದರು.
ಶ್ರೀರಂಗಪಟ್ಟಣ ತಾಲೂಕು ಕಚೇರಿ ಶೋಧನೆ ಮಾಡಲು ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ, ಪೊಲೀಸ್ ಉಪಾಧೀಕ್ಷಕ ಹೆಚ್.ಟಿ.ಸುನೀಲ್ಕುಮಾರ್ ನೇತೃತ್ವದ ತಂಡ ಹಾಗೂ ಕಿರಂಗೂರು ಗ್ರಾಪಂ ಕಚೇರಿ ಶೋಧನೆಗೆ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಎಂ.ರವಿಕುಮಾರ್, ಆರ್.ಜಿ.ಲೇಪಾಕ್ಷಮೂರ್ತಿ ನೇತೃತ್ವದ ಎರಡು ತಂಡಗಳನ್ನು ರಚಿಸಿಕೊಂಡು ಶೋಧನೆಗಳಿದಾಗ ಅಕ್ರಮಗಳ ಸರಮಾಲೆಗಳು ಬೆಳಕಿಗೆ ಬಂದವು.
ಜಮೀನುಗಳ ವಿನ್ಯಾಸನಕ್ಷೆ ಅನುಮೋದನೆಗೆ ಅರ್ಜಿದಾರರು ಅರ್ಜಿಯನ್ನು ಪಂಚಾಯಿತಿಗೆ ಸಲ್ಲಿಸಿರುವ ಬಗ್ಗೆ ಗ್ರಾಪಂನಿಂದ ತಾಲೂಕು ಪಂಚಾಯಿತಿಗೆ ಅನುಮೋದನೆ ಸಂಬಂಧ ಪತ್ರ ವ್ಯವಹಾರ ನಡೆಸಿರುವ ದಾಖಲೆಗಳೇ ಇಲ್ಲ. ಕೇವಲ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಿರುವ ಆದೇಶ ಪ್ರತಿ ಮಾತ್ರ ಕಂಡುಬಂದಿದೆ. ತಾಪಂ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ವೇಣು ಅರ್ಜಿದಾರರು ಕೋರಿಕೆ ಸಲ್ಲಿಸದಿದ್ದರೂ ವಿನ್ಯಾಸನಕ್ಷೆಗೆ ಅನುಮೋದನೆ ನೀಡಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿದ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ, ಮೊಗರಹಳ್ಳಿ, ಅಣಗನಹಳ್ಳಿ, ಗ್ರಾಮದ ಹಲವಾರು ಸರ್ವೆ ನಂಬರ್ಗಳಲ್ಲಿರುವ ಜಮೀನುಗಳಲ್ಲಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವಿನ್ಯಾಸನಕ್ಷೆ ಅನುಮೋದನೆ ಮಾಡಿರುವುದು ಕಂಡುಬಂದಿದೆ. 2022ನೇ ಸಾಲಿನ ಭೂ ಪರಿವರ್ತಿತ ಜಮೀನಿನ ಅನುಮೋದಿತ ವಿನ್ಯಾಸ ನಕ್ಷೆಯ 42 ಕಡತಗಳಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾಡಿರುವ ಅಂತಿಮ ವಿನ್ಯಾಸ ನಕ್ಷೆ ಅನುಮೋದನೆ ಆದೇಶವನ್ನು ಹೊರತುಪಡಿಸಿ ಯಾವುದೇ ದಾಖಲೆಗಳು ಕಚೇರಿಯಲ್ಲಿ ಕಂಡುಬಂದಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ವಿಸ್ತೀರ್ಣದಲ್ಲಿ ರಸ್ತೆ, ಉದ್ಯಾನವನ, ಪಾರ್ಕಿಂಗ್ಗಳನ್ನು ವಿನ್ಯಾಸ ನಕ್ಷೆಯಲ್ಲಿ ಅನುಮೋದಿಸದೆ ಅನುಮೋದನೆ ನೀಡಲಾಗಿದೆ.
ಕಿರಂಗೂರು, ಜಕ್ಕನಹಳ್ಳಿ, ಹೊಸಹಳ್ಳಿ, ಬೆಳಗೊಳ, ಚಿಕ್ಕಅಂಕನಹಳ್ಳಿ, ಕೆ.ಆರ್.ಸಾಗರ, ನೆಲಮನೆ, ನೀಲನಕೊಪ್ಪಲು, ಅಗ್ರಹಾರ, ಕೆ.ಶೆಟ್ಟಹಳ್ಳಿ, ಕಡತನಾಳು, ಬ್ರಹ್ಮಪುರ, ದರಸಗುಪ್ಪೆ, ನಗುವಿನಹಳ್ಳಿ ಗ್ರಾಮದ ನೂರಾರು ಸರ್ವೆ ನಂಬರ್ಗಳಲ್ಲಿ ಪಾರ್ಕಿಂಗ್ ಜಾಗ, ಕಾಲುವೆ ಯಾವ ರೀತಿ ಇದೆ, ಬಫರ್ಜೋನ್ ಸೇರಿದಂತೆ ಹಲವಾರು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ವಿನ್ಯಾಸನಕ್ಷೆ ಅನುಮೋದನೆ ನೀಡಲಾಗಿದೆ. ಹಲವಾರು ಪ್ರಕರಣಗಳಲ್ಲಿ ಏಕ ನಿವೇಶನಕ್ಕೆ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿ ಬಹು ನಿವೇಶನಗಳ ನಕಾಶೆ ಲಗತ್ತಿಸಿದ್ದರೂ ಅನುಮೋದನೆ ನೀಡಿದೆ. ಹಲವೆಡೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆದಿಲ್ಲವೆಂದು ತಿಳಿಸಲಾಗಿದೆ.
Laxmi News 24×7