ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದ ಅದೃಷ್ಟವೇ ಸರಿ ಇಲ್ಲ ಅನಿಸುತ್ತೆ. ಕಳೆದ ಮೂರು ತಿಂಗಳಿನಿಂದ ಸರ್ಕಾರದ ವಿರುದ್ಧ ಒಂದಾದ ಮೇಲೊಂದರಂತೆ ಆರೋಪ ಕೇಳಿ ಬರ್ತಿದೆ. ಸುಶಾಂತ್ ಸಿಂಗ್ ಪ್ರಕರಣದಿಂದ ಹಿಡಿದು ನೌಕಾಪಡೆಯ ಮಾಜಿ ಅಧಿಕಾರಿ ಮೇಲಿನ ಹಲ್ಲೆವರೆಗೆ ಸಾಕಷ್ಟು ಘಟನೆಗಳು ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸುವಂತೆ ಮಾಡಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋ ಆರೋಪಗಳನ್ನ ಮಾಡಲಾಗ್ತಿದೆ.
ಇದೆಲ್ಲದರ ನಡುವೆ ನೌಕಾಪಡೆಯ ಮಾಜಿ ಅಧಿಕಾರಿ ಮದನ್ ಶರ್ಮಾ ಇವತ್ತು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿಯನ್ನು ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾತನಾಡಿದ ಅವರು, ‘ರಾಷ್ಟ್ರಪತಿ ಆಳ್ವಿಕೆ ಹೇರುವ ಬಗ್ಗೆ ಕೇಂದ್ರದ ಜೊತೆ ಮಾತನಾಡುತ್ತೇನೆಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ’ ಎಂದಿದ್ದಾರೆ.
ಮತ್ತೊಂದು ಬೆಳವಣಿಗೆಯಲ್ಲಿ ಮದನ್ ಶರ್ಮಾ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ದಿನದಲ್ಲಿ ಬೇಲ್ ಪಡೆದು ಹೊರಬಂದಿದ್ದ 6 ಆರೋಪಿಗಳನ್ನು ಪೊಲೀಸರು ಮತ್ತೆ ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಲ್ಲಿ ಇಬ್ಬರು ಆಡಳಿತ ಪಕ್ಷವಾದ ಶಿವಸೇನೆಯ ಶಾಖಾ ಮುಖ್ಯಸ್ಥರಾಗಿದ್ದಾರೆ. ಉಳಿದ ನಾಲ್ವರು ಶಿವಸೇನೆ ಜೊತೆ ಸಂಪರ್ಕ ಹೊಂದಿದ್ದಾರೆ. ಎಫ್ಐಆರ್ನಲ್ಲಿ ಐಪಿಸಿ ಸೆಕ್ಷನ್ 452 (ದಾಳಿ ನಡೆಸುವ ಉದ್ದೇಶದಿಂದ ಮನೆಯೊಳಗೆ ನುಗ್ಗಿದ್ದು, ಹಲ್ಲೆ) ಅನ್ನು ಪೊಲೀಸರು ಸೇರಿಸಿದ್ದಾರೆ. ಇದರ ಆಧಾರದಲ್ಲೇ ಆರೋಪಿಗಳನ್ನು ಮತ್ತೆ ಬಂಧಿಸಲಾಗಿದೆ.