ಮನುಷ್ಯನ ಅನುಭವಿಸಬಹುದಾದ ಅರ್ಧಕ್ಕಿಂತ ಹೆಚ್ಚು ಮಾನಸಿಕ ಸಮಸ್ಯೆಗಳು 14 ವರ್ಷಕ್ಕಿಂತ ಮುನ್ನವೇ ಆರಂಭವಾಗಿರುತ್ತದೆ ಎಂದು ಚಂಡೀಗಡದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಮಾನಸಿಕ ವಿಭಾಗದ ಮುಖ್ಯಸ್ಥೆ ಡಾ.ಸವಿತಾ ಮಲ್ಹೋತ್ರಾ ತಿಳಿಸಿದ್ದಾರೆ. ಪ್ರತಿಯೊಬ್ಬನ ಬಾಲ್ಯದ ಜೀವನ ಜೀವನದ ಉದ್ದಕ್ಖೂ ಪ್ರಭಾವ ಬೀರುತ್ತದೆ. ಹೀಗಾಗಿ ಬಾಲ್ಯದ ಜೀವನ ಅತ್ಯಂತ ಉತ್ತಮವಾಗಿರುವುದು ಮುಖ್ಯ ಎಂದು ಅವರು ತಿಳಿಸಿದ್ದಾರೆ.
‘ಮಕ್ಕಳ ಮಾನಸಿಕ ಆರೋಗ್ಯ- ಮಾನಸಿಕ ಆರೋಗ್ಯದ ವಿಶ್ವ’ ಎಂಬ ವಿಷಯದ ಅಡಿ ಉಪನ್ಯಾಸ ನೀಡಿದ ಅವರು, ಪ್ರತಿಯೊಬ್ಬನ ಮಾನಸಿಕ ಸ್ಥಿತಿಯೂ ಆತ ಬಾಲ್ಯದಲ್ಲಿ ಬದುಕಿದ ವಾತಾವರಣ ಮತ್ತು ಸಮಾಜವನ್ನು ಅವಲಂಬಿಸಿರುತ್ತದೆ. ಬಾಲ್ಯದ ಮಾನಸಿಕ ಅವಸ್ಥೆ ಮಾನಸಿಕತೆಯ ಬೇರಿದ್ದಂತೆ. ಅದು ಜೀವನದ ಉದ್ದಕ್ಕೂ ಪ್ರಭಾವ ಬೀರುತ್ತಲೆ ಇರುತ್ತದೆ. ಬಾಲ್ಯದಲ್ಲಿ ಅನುಭವಿಸಿದ ಅಥವಾ ಕಂಡ ಬಡತನ, ಸೋಲು, ಅವಮಾನ, ಗೊಂದಲ ಮುಂತಾದ ಅಂಶಗಳು ನಮ್ಮಲ್ಲಿ ಯಾವತ್ತೂ ಜಾಗೃತವಾಗಿರುವುದುನ್ನು ನಾವು ಗಮನಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯಾವುದೇ ಮನುಷ್ಯನಲ್ಲಿ ಉದ್ಭವಿಸುವ ಶೇಕಡಾ 50ರಷ್ಟು ಮಾನಸಿಕ ಖಾಯಿಲೆಗಳು ಬಾಲ್ಯದ 14 ವರ್ಷದ ಒಳಗೇ ಸೃಷ್ಟಿಯಾಗಿರುತ್ತವೆ. 25 ವರ್ಷದ ಒಳಗೆ ಶೇಕಡಾ 75ರಷ್ಟು ಮಾನಸಿಕ ಸಮಸ್ಯೆಗಳು ರೂಪುಗೊಂಡಿರುತ್ತವೆ ಎಂದು ಅವರು ತಿಳಿಸಿದ್ದಾರೆ.
ಬಾಲ್ಯದಲ್ಲಿ ಮಾನಸಿಕ ಸಮಸ್ಯೆಗಳು ಉಂಟಾಗದಂತೆ ಮಕ್ಕಳನ್ನು ಬೆಳೆಸುವುದು ಅವರ ಭವಿಷ್ಯವನ್ನು ಉತ್ತಮವಾಗಿಸುತ್ತವೆ. ಮಾನಸಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ. ಆದ್ದರಿಂದ ಮಕ್ಕಳ ಬಾಲ್ಯವನ್ನು ಮುಕ್ತವಾಗಿ -ಉತ್ತಮವಾಗಿ ಇಟ್ಟುಕೊಳ್ಳುವಂತಹ ವಾತಾವರಣ ರೂಪಿಸುವಂತೆ ಅವರು ಸಲಹೆ ನೀಡಿದ್ದಾರೆ.