ಮಡಿಕೇರಿ: ಲಾಕ್‍ಡೌನ್ ಸಮಯದಲ್ಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಕಾರ್ಮಿಕರಿಗೆ ಧನ ಸಹಾಯ ಮಾಡಲು ಮುಂದಾಗಿದೆ.
ಈಗ ಈ ಧನಸಹಾಯವನ್ನು ಪಡೆಯಲು ಕಾರ್ಮಿಕರು ಯಾವ ಮಾರ್ಗವನ್ನು ಅನುಸರಿಸಬೇಕು ಮತ್ತು ಸರ್ಕಾರದ ಈ ಹಣವನ್ನು ಪಡೆಯಲು ಯಾರು ಅರ್ಹರು ಎಂಬ ಮಾಹಿತಿಯನ್ನು ಮಡಿಕೇರಿ ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಮಡಿಕೇರಿ ಜಿಲ್ಲಾಡಳಿತ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ತಿಳಿಸಿದೆ.
ಕರ್ನಾಟಕ ಸರ್ಕಾರದ ಅದೇಶದನ್ವಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯವರ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕ ಫಲಾನುಭವಿಗಳ ಖಾತೆಗೆ ಒಂದು ಬಾರಿ ಮಾತ್ರ ಐದು ಸಾವಿರ ಹಣವನ್ನು ಡಿಬಿಟಿ ಮೂಲಕ ಜಮಾ ಮಾಡಲಾಗುತ್ತದೆ.
ಯಾರು ಅರ್ಹರು?
ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಳಲ್ಲಿ ತೊಡಗಿರುವ ಎಲ್ಲಾ ನೋಂದಾಯಿತ ಕಾರ್ಮಿಕರು ಈ ಯೋಜನೆಗೆ ಅರ್ಹರಾಗಿದ್ದಾರೆ.
ಅರ್ಜಿ ಸಲ್ಲಿಕೆ ಹೇಗೆ?
ಆಯಾ ತಾಲೂಕಿನ ಹಿರಿಯ ನಿರೀಕ್ಷಕರು ಅಥವಾ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.
ದಾಖಲೆ ಏನು ಬೇಕು?
1. ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿರುವ ಬಗ್ಗೆ ಪಡೆದ ನೋಂದಾಯಿತ ಗುರುತಿನ ಚೀಟಿಯ ಪ್ರತಿ
2. ಆಧಾರ್ ಕಾರ್ಡ್ ಪ್ರತಿ
3. ಬ್ಯಾಂಕ್ ಅಕೌಂಟ್ ನಂಬರ್, ಐಎಫ್‍ಸಿ ಕೋಡ್, ಹೆಸರು, ವಿಳಾಸ ಇರುವ ಬ್ಯಾಂಕ್ ಪಾಸ್ ಪುಸ್ತಕದ ಸ್ಪಷ್ಟವಾದ ಪ್ರತಿ