ಮಡಿಕೇರಿ: ಕೊರೊನಾ ವಿಶ್ವದಾದ್ಯಂತ ತಲ್ಲಣ ಮೂಡಿಸಿದ್ದು, ಭಾರತ ಸೇರಿದಂತೆ ಹಲವು ರಾಷ್ಟ್ರಗಳನ್ನು ಲಾಕ್‍ಡೌನ್ ಮಾಡಲಾಗಿದೆ. ಈ ಪರಿಣಾಮ ಹಲವರ ಬದುಕು ಬೀದಿಗೆ ಬಂದಿದೆ. ವರ್ಷದಲ್ಲಿ 6 ತಿಂಗಳು ಮದುವೆ, ನಾಮಕರಣ, ಪ್ರೀವೆಡ್ಡಿಂಗ್ ಶೂಟ್ ಹೀಗೆ ಫೋಟೋ ಹಾಗೂ ವಿಡಿಯೋ ಮಾಡಿಕೊಂಡು ಜೀವನ ನಡೆಸುತ್ತಿದ್ದ ಹಲವು ಛಾಯಾಗ್ರಾಹಕರ ಕುಟುಂಬಗಳಿಗೆ ಕೊರೊನಾ ಲಾಕ್‍ಡೌನ್ ಎಫೆಕ್ಟ್ ತಟ್ಟಿದೆ.

ಇದಕ್ಕೆ ಕೊಡಗು ಜಿಲ್ಲೆಯ ಛಾಯಾಗ್ರಾಹಕರು ಹೊರತಾಗಿಲ್ಲ. ಏಕಾಏಕಿ ದೇಶದಾದ್ಯಂತ ಲಾಕ್‍ಡೌನ್ ಘೊಷಿಸಿದ್ದರಿಂದ ಯಾವುದೇ ಮದುವೆ ಹಾಗೂ ಶುಭ ಸಮಾರಂಭಗಳು ನಡೆಯುತ್ತಿಲ್ಲ, ಎಲ್ಲವೂ ರದ್ದಾಗಿವೆ. ಆದ್ದರಿಂದ ಯಾವುದೇ ಕಾರ್ಯಕ್ರಮಗಳಿಲ್ಲದೆ ವ್ಯವಹಾರ ಇಲ್ಲದಂತಾಗಿದ್ದು, 300ಕ್ಕೂ ಹೆಚ್ಚು ಛಾಯಾಗ್ರಾಹಕ ಕುಟುಂಬಗಳು ಪ್ರತಿನಿತ್ಯ ಪರದಾಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಸ್ಟುಡಿಯೋ ಆರಂಭಿಸಿದ್ದವರ ಬದುಕು ಲಾಕ್‍ಡೌನ್‍ನಿಂದ ಅತಂತ್ರವಾಗಿದೆ.

ಛಾಯಾಗ್ರಹಕ ವೃತ್ತಿಯಲ್ಲಿ ಇದೀಗ ಕೆಲಸ ಇಲ್ಲದೆ ಕೆಲವರು ಬದುಕಿನ ಬಂಡಿ ಎಳೆಯಲು ಬೇರೆ ದಾರಿ ಕಾಣದೆ, ನಗರಗಳು ಹಾಗೂ ಹಳ್ಳಿ, ಹಳ್ಳಿಗಳಿಗೆ ಹೋಗಿ ಹಣ್ಣು-ತರಕಾರಿ ಮಾರಾಟ ಮಾಡುತ್ತಿರುವುದು ಮನಕಲಕುವಂತಿದೆ. ಕ್ಯಾಮರಾ ಹಿಡಿದು ಬೇರೆಯವರ ಜೀವನದ ಸಂತೋಷದ ಕ್ಷಣಗಳನ್ನು ಸೆರೆಹಿಡಿಯುತ್ತಿದ್ದವರ ಜೀವನ ಇದೀಗ ತೀರ ಸಂಕಷ್ಟದಲ್ಲಿ ಇದೆ. ಹೀಗಾಗಿ ಛಾಯಾಗ್ರಾಹಕರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
 Laxmi News 24×7
Laxmi News 24×7
				 
		 
						
					 
						
					 
						
					