ಮಂಡ್ಯ : ಒಡಲು ತುಂಬಿರುವ ಕನ್ನಂಬಾಡಿ ಕಟ್ಟೆಯಲ್ಲಿ ಕಾವೇರಿ ಮಾತೆಗೆ ಸಿಎಂ ಯಡಿಯೂರಪ್ಪ ಇಂದು ಬಾಗಿಲ ಅರ್ಪಿಸಲಿದ್ದಾರೆ. ಕೆಆರ್‌ಎಸ್ ಜಲಾಶಯದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಕಾವೇರಿಗೆ ಬಾಗಿನ ಸಲ್ಲಿಸುವ ಭಾಗ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೊರೆತಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈಗಾಗಲೇ ಕಾವೇರಿ ತಾಯಿಗೆ ನಾಲ್ಕು ಬಾರಿ ಬಾಗಿನ ಅರ್ಪಿಸಿದ್ದಾರೆ.
ಗೌರಿ ಹಬ್ಬದಂದು ಐದನೇ ಬಾರಿಗೆ ಬಾಗಿನ ಅರ್ಪಿಸಲಿದ್ದಾರೆ.ಈ ಮೂಲಕ ಕೆಆರ್‌ಎಸ್ ಜಲಾಶಯಕ್ಕೆ ಹೆಚ್ಚಿನ ಬಾರಿ ಬಾಗಿನ ಅರ್ಪಿಸಿದ ಕೀರ್ತಿಗೆ ಯಡಿಯೂರಪ್ಪ ಪಾತ್ರರಾಗಲಿದ್ದಾರೆ.
ವಿಶೇಷವೆಂದರೆ ಕಳೆದ ವರ್ಷ ಆಗಸ್ಟ್ 21ರಂದು ಕೆಆರ್‌ಎಸ್ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಬಾಗಿನ ಅರ್ಪಿಸಿದ್ದರು. ಕಾಕತಾಳೀಯವೆಂಬಂತೆ ಈ ವರ್ಷ ಕೂಡ ಕೆಆರ್‌ಎಸ್ ಜಲಾಶಯ ಆಗಸ್ಟ್ ತಿಂಗಳಿನಲ್ಲಿ ಪುನಃ ಭರ್ತಿಯಾಗಿದ್ದು, ಮುಖ್ಯಮಂತ್ರಿಗಳು ಆಗಸ್ಟ್ 21 ರಂದೇ ಬಾಗಿನ ಅರ್ಪಿಸಲಿದ್ದಾರೆ.
ಈವರೆಗೆ ಆರ್.ಗುಂಡೂರಾವ್, ಎಸ್.ಬಂಗಾರಪ್ಪ, ಎಚ್.ಡಿ.ಕುಮಾರಸ್ವಾಮಿ ಅವರು ತಲಾ ಮೂರು ಬಾಗಿ ಬಾಗಿನ ಸಲ್ಲಿಸಿದ್ದಾರೆ.
ತಲಾ 2 ಬಾರಿ ರಾಮಕೃಷ್ಣ ಹೆಗಡೆ, ಎಂ.ವೀರಪ್ಪಮೊಯ್ಲಿ, ಎಸ್.ಎಂ.ಕೃಷ್ಣ, ಎನ್.ಧರ್ಮಸಿಂಗ್, ಸಿದ್ದರಾಮಯ್ಯ ಹಾಗೂ ತಲಾ ಒಮ್ಮೊಮ್ಮೆ ಡಿ.ದೇವರಾಜ ಅರಸು, ಪಿ.ವೆಂಕಟಸುಬ್ಬಯ್ಯ (ರಾಜ್ಯಪಾಲರು-1988), ವೀರೇಂದ್ರ ಪಾಟೀಲ್, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಡಿ.ವಿ.ಸದಾನಂದಗೌಡ ಬಾಗಿನ ಸಲ್ಲಿಸಿದ್ದಾರೆ.
ಅದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 5ನೇ ಬಾರಿ ಕಾವೇರಿ ಮಾತೆಗೆ ಬಾಗಿನ ಸಲ್ಲಿಸುವ ಅವಕಾಶ ಒದಗಿ ಬಂದಿದೆ. ಆ ಮೂಲಕ ಬಿಎಸ್‌ವೈ ಅವರು ಹೊಸ ದಾಖಲೆ (2008, 2009, 2010, 2019 ಹಾಗೂ 2020) ನಿರ್ಮಿಸಲಿದ್ದಾರೆ.
ಕೆಆರ್‌ಎಸ್‌ಗೆ ಬಾಗಿನ ಸಲ್ಲಿಸುವ ಸಂಪ್ರದಾಯ ಡಿ.ದೇವರಾಜ ಅರಸು ಅವರಿಂದ ಪ್ರಾರಂಭಗೊಂಡಿದೆ. ಮೊದಲ ಬಾರಿಗೆ 1979ರಲ್ಲಿ ಸಿಎಂ ಆಗಿದ್ದ ದೇವರಾಜ ಅರಸು ಬಾಗಿನ ಸಲ್ಲಿಸಿದ್ದರು. ನಂತರ 1980ರಲ್ಲಿ ಆರ್.ಗುಂಡೂರಾವ್ ಅವರೂ ಈ ಪರಂಪರೆ ಮುಂದುವರೆಸಿದರು