ಬಿಟ್ ಕಾಯಿನ್ ಬಗ್ಗೆ ಉತ್ತರ ನೀಡಲು ಆರ್.ಅಶೋಕ್ ಗೃಹ ಸಚಿವರಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ
2018ರಲ್ಲಿ ನಾನು ಸಿಎಂ ಸ್ಥಾನದಲ್ಲಿ ಇದ್ದಿದ್ದು ನಿಜ ಇಲ್ಲವೆನ್ನಲ್ಲ. ಬಿಟ್‍ಕಾಯಿನ್ ಹಗರಣ ಬಗ್ಗೆ ಆಗ ಯಾರೂ ದೂರು ಕೊಟ್ಟಿಲ್ಲ. ಕೇಸ್ ದಾಖಲಾಗದೆ ನಮಗೆ ಹೇಗೆ ಗೊತ್ತಾಗುತ್ತೆ. ಒಂದು ವೇಳೆ ಬಿಜೆಯವರಿಗೆ ಗೊತ್ತಿದ್ದರೆ ಯಾಕೆ ಸುಮ್ಮನಿದ್ದರು..? ಆಗ ಜವಾಬ್ದಾರಿಯುತ ವಿಪಕ್ಷ ಸ್ಥಾನದಲ್ಲಿದ್ದವ್ರು ಹೊರತರಬೇಕಿತ್ತು. ಅಂದು ಸುಮ್ಮನೆ ಇದ್ದಿದ್ದು ಯಾಕೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ನಾವು ಬಿಜೆಪಿ ನಾಯಕರ ಪ್ರಶ್ನೆಗೆ ಉತ್ತರ ನೀಡುವ ಮೊದಲು ರಣದೀಪ್ ಸುರ್ಜೇವಾಲ ಕೇಳಿರುವ ಪ್ರಶ್ನೆಗೆ ಅವರು ಉತ್ತರ ಕೊಡಲಿ. ನಲಪಾಡ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಆಗ ಯಾವುದೇ ಬಿಟ್‍ಕಾಯಿನ್ ಕೇಸ್ ಬಗ್ಗೆ ಕೇಳಿಬಂದಿರಲಿಲ್ಲ.
ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ನಡೆದಿರುವ ಪ್ರಕರಣವಿದು. ಉತ್ತರ ನೀಡಲು ಆರ್.ಅಶೋಕ್ ಅಂದು ಗೃಹಸಚಿವರಾಗಿರಲಿಲ್ಲ. ಕೇಸ್‍ನಲ್ಲಿ ಯಾರಿದ್ದಾರೆಂದು ಬೊಮ್ಮಾಯಿ ಬಹಿರಂಗಗೊಳಿಸಲಿ ಎಂದು ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಆಗ್ರಹಿಸಿದರು. ಇನ್ನು ಬಿಟ್‍ಕಾಯಿನ್ ಹಗರಣದಲ್ಲಿ ಭಾಗಿಯಾದವ್ರ ಹೆಸರು ಅವರಿಗೆ ಗೊತ್ತಾಗಬೇಕು. ಅವರದ್ದೇ ಸರ್ಕಾರವಿದೆ, ಆಗಲ್ಲವಂದ್ರೆ ಅಧಿಕಾರ ಬಿಟ್ಟು ಹೋಗಲಿ ಎಂದು ಕಿಡಿಕಾರಿದರು.