ನಿಜಾಮಾಬಾದ್ (ತೆಲಂಗಾಣ): ತೆಲಂಗಾಣದಲ್ಲಿ ಅರಿಶಿನ ಮಂಡಳಿ ಸ್ಥಾಪಿಸುವುದಾಗಿ ಭಾನುವಾರ ಮಹಬೂಬ್‌ನಗರದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಘೋಷಿಸಿದ ಬೆನ್ನಲ್ಲೇ ಸುಮಾರು 12 ವರ್ಷಗಳ ನಂತರ ರೈತರೊಬ್ಬರು ಕಾಲಿಗೆ ಚಪ್ಪಲಿ ಹಾಕಿದ್ದಾರೆ.
ಉತ್ತಮ ಬೆಲೆಯಿಲ್ಲದೆ ಅರಿಶಿನ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಂಬಲ ಬೆಲೆ ಪಡೆಯಲು ರಾಜ್ಯದಲ್ಲಿ ಮಂಡಳಿ ಸ್ಥಾಪಿಸಬೇಕು ಎಂದು ನಿಜಾಮಾಬಾದ್ ಜಿಲ್ಲೆಯ ಮೋರ್ತಾಡ್ ಮಂಡಲದ ಪಾಲೆಂ ಗ್ರಾಮದ ರೈತ ಮುತ್ಯಾಲ ಮನೋಹರರೆಡ್ಡಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಅರಿಶಿನ ಮಂಡಳಿ ಸ್ಥಾಪನೆ ಮಾಡಬೇಕೆಂಬ ಉದ್ದೇಶದಿಂದ ಮುತ್ಯಾಲ ಮನೋಹರರೆಡ್ಡಿ ಅವರು ನವೆಂಬರ್ 4, 2011 ರಿಂದ ಚಪ್ಪಲಿ ಧರಿಸದಿರಲು ನಿರ್ಧರಿಸಿದರು. ಬಳಿಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಪತ್ರಗಳನ್ನು ನೀಡಿದ್ದಾರೆ. 2013ರಲ್ಲಿ ಆರ್ಮೂರ್‌ನಿಂದ ತಿರುಪತಿಗೆ ಕಾಲ್ನಡಿಗೆಯಲ್ಲಿ ತೆರಳಿ ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ್ದರು. ಆದ್ರೆ, ಇತ್ತೀಚೆಗೆ ಪ್ರಧಾನಿ ಮೋದಿಯವರು ಅರಿಶಿನ ಮಂಡಳಿ ಸ್ಥಾಪನೆ ಮಾಡುವುದಾಗಿ ಘೋಷಿಸಿದ ಬಳಿಕ ಮನೋಹರ್ ರೆಡ್ಡಿ ಅವರು ಭಾನುವಾರ (ನಿನ್ನೆ) ಸಂಜೆ ನಿಜಾಮಾಬಾದ್ ಕೃಷಿ ಮಾರುಕಟ್ಟೆ ಕಚೇರಿಯಲ್ಲಿ ಚಪ್ಪಲಿ ಧರಿಸಿದರು. ಈ ವೇಳೆ ಬಹುದಿನಗಳ ಅವರ ಕನಸು ನನಸಾಗಿದ್ದಕ್ಕೆ ಪ್ರಧಾನಿಯವರಿಗೆ ಕೃತಜ್ಞತೆ ಸಲ್ಲಿಸಿದರು.
ಮೋದಿ ಹೇಳಿದ್ದೇನು? : ‘ಭಾರತವು ಅರಿಶಿನದ ಪ್ರಮುಖ ಉತ್ಪಾದಕ, ಗ್ರಾಹಕ ಮತ್ತು ರಫ್ತುದಾರ. ತೆಲಂಗಾಣದ ರೈತರು ಹೆಚ್ಚಿನ ಪ್ರಮಾಣದಲ್ಲಿ ಅರಿಶಿನವನ್ನು ಉತ್ಪಾದಿಸುತ್ತಾರೆ. ಕೋವಿಡ್ ನಂತರ ಅರಿಶಿನದ ಬಗ್ಗೆ ಜಾಗೃತಿ ಹೆಚ್ಚಾಗಿದೆ ಮತ್ತು ಜಾಗತಿಕ ಬೇಡಿಕೆಯೂ ಹೆಚ್ಚಾಗಿದೆ. ಅರಿಶಿನ ಬೆಳೆಯುವ ರೈತರ ಅಗತ್ಯತೆ ಮತ್ತು ಭವಿಷ್ಯದ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಅರಿಶಿನ ಮಂಡಳಿಯನ್ನು ಸ್ಥಾಪಿಸಲು ಕೇಂದ್ರ ನಿರ್ಧರಿಸಿದೆ’ ಎಂದು ತಿಳಿಸಿದ್ದಾರೆ.
ರೈತರ ಸಂಭ್ರಮಾಚರಣೆ : ತೆಲಂಗಾಣ ರಾಜ್ಯದಲ್ಲಿ ಅರಿಶಿನ ಬೆಳೆಯ ಹೆಸರು ಹೇಳಿದರೆ ನಿಜಾಮಾಬಾದ್ ಜಿಲ್ಲೆ ನೆನಪಾಗುತ್ತದೆ. ದಶಕಗಳಿಂದ ಇಲ್ಲಿನ ರೈತರು ಅರಿಶಿನ ಕೃಷಿ ಮಾಡುವ ಮೂಲಕ ವಿಶೇಷ ಮನ್ನಣೆ ಗಳಿಸಿದ್ದಾರೆ. ರಾಜ್ಯದ ಏಕೈಕ ಅರಿಶಿನ ಮಾರುಕಟ್ಟೆಯೂ ಸಮೀಪದಲ್ಲಿದೆ. ರೈತರು ಪ್ರತಿ ವರ್ಷ ಆರು ಲಕ್ಷ ಕ್ವಿಂಟಲ್‌ಗೂ ಹೆಚ್ಚು ಅರಿಶಿನವನ್ನು ನಿಜಾಮಾಬಾದ್ ಮಾರುಕಟ್ಟೆಗೆ ತರುತ್ತಾರೆ. ನಿಜಾಮಾಬಾದ್ ಹೊರತುಪಡಿಸಿ ಜಗಿತ್ಯಾಲ, ನಿರ್ಮಲ್, ವಾರಂಗಲ್ ಜಿಲ್ಲೆಗಳಲ್ಲಿ ಅರಿಶಿನ ಬೆಳೆಯಲಾಗುತ್ತಿದ್ದು, ನಿಜಾಮಾಬಾದ್ ಒಂದರಲ್ಲೇ 35 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿದೆ. ಇದೀಗ ಅರಿಶಿಣ ಮಂಡಳಿಗೆ ಪ್ರಧಾನಿ ಮೋದಿ ಮಂಜೂರಾತಿ ನೀಡಿದ ಹಿನ್ನೆಲೆ ರೈತರ ದಶಕಗಳ ಕನಸು ನನಸಾಗಿದ್ದು, ಸಂಭ್ರಮ ಮನೆಮಾಡಿದೆ.