ಬೆಳಗಾವಿ : ಅಭಿವೃದ್ಧಿಯಲ್ಲಿ ತಾರತಮ್ಯವಾಗಿರುವ ರೀತಿಯಲ್ಲೇ ಉತ್ತರ ಕರ್ನಾಟಕದವರು ಎಂಬ ಕಾರಣಕ್ಕಾಗಿ ನಾವು ಸಚಿವರಾಗಿಲ್ಲ ಎಂದು ಬಿಜೆಪಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.
ವಿಧಾನಸಭೆಯಲ್ಲಿ ಇಂದು ನಿಯಮ 69 ಅಡಿಯಲ್ಲಿ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಮೊದಲಿನಿಂದಲೂ ತಾರತಮ್ಯ ಇದೆ. ಅದೇ ರೀತಿ ಉತ್ತರ ಕರ್ನಾಟಕದವರು ಎಂಬ ಕಾರಣಕ್ಕಾಗಿ ನಾವು ಸಚಿವರಾಗಿಲ್ಲ ಎನ್ನುವ ಮೂಲಕ ತಾವು ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದು ಪರೋಕ್ಷವಾಗಿ ಹೇಳಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಮಂಡಳಿ ರಚನೆಗೆ ಒತ್ತಾಯ
ಏಕೀಕರಣವಾಗಿ 65 ವರ್ಷವಾದರೂ ತಾರತಮ್ಯ ಸರಿಪಡಿಸಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಮಂಡಳಿ ರಚನೆಯಾಗಬೇಕು ಎಂದು ಒತ್ತಾಯಿಸಿದ ಅವರು, ನಂಜುಂಡಪ್ಪ ವರದಿ ಪ್ರಕಾರ ಸಚಿವ ಸಂಪುಟದಲ್ಲಿ ಶೇ.50ರಷ್ಟು ಮೀಸಲಿರಬೇಕು ಎಂದಿದೆ. ಆದರೆ ಸಂಪುಟದಲ್ಲಿ ಬೆಳಗಾವಿ, ಬೆಂಗಳೂರಿಗೆ ಆದ್ಯತೆ ದೊರೆತಿದೆ. ಉಪಸಭಾಧ್ಯಕ್ಷರು, ಸಭಾಧ್ಯಕ್ಷರು, ನಾನು, ಬಸನಗೌಡ ಪಾಟೀಲ ಯತ್ನಾಳ್ ಮಂತ್ರಿಯಾಗಬಹುದಿತ್ತು. ನಾವು ಉತ್ತರ ಕರ್ನಾಟಕದವರು ಅದಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಭಿವೃದ್ಧಿ ವಿಚಾರವಾಗಿ ತಾರತಮ್ಯ ಆಗಿದೆ. ಈ ಬಗ್ಗೆ ಒಮ್ಮತದದಿಂದ ಸದನದಲ್ಲಿ ನಿರ್ಣಯ ಪಾಸ್ ಮಾಡಲಿ ಎಂದು ಒತ್ತಾಯಿಸಿದರು. ತಾರತಮ್ಯದ ಬಗ್ಗೆ ಸರ್ಕಾರದಿಂದ ಉತ್ತರ ಬೇಕಿದೆ. ಐಎಎಸ್ ಅಧಿಕಾರಿಗಳು ಸ್ಮಾರ್ಟ್ ಆಗಿ ಉತ್ತರ ಕೊಡುತ್ತಾರೆ. ಆದರೆ ನಮಗೆ ಉತ್ತರ ಬೇಡ ಪರಿಹಾರ ಬೇಕು. ಕೂಡಲೇ ಒಂದು ತಜ್ಞರ ಸಮಿತಿ ರಚನೆ ಮಾಡಿ. ತಾರತಮ್ಯದ ಬಗ್ಗೆ ಬಜೆಟ್ ಮೊದಲು ಪರಿಹಾರದ ಕುರಿತು ನಿರ್ಧಾರ ಮಾಡಬೇಕು ಎಂದು ಆಗ್ರಹಿಸಿದರು.