ಕೊಪ್ಪಳ: ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಮೆಂತೋಪ್ಲಸ್ ಡಬ್ಬಿಯನ್ನು ಸರ್ಕಾರಿ ವೈದ್ಯರು ಯಶಸ್ವಿಯಾಗಿ ಹೊರತೆಗೆದು ಅಪಾಯದಿಂದ ಪಾರು ಮಾಡಿದ್ದಾರೆ.
ಈ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ ಎಂಬ (8) ತಿಂಗಳ ಮಗು ಆಟವಾಡುತ್ತಾ ಮೆಂತೋಪ್ಲಸ್ ಡಬ್ಬಿ ನುಂಗಿತ್ತು. ಕೂಡಲೇ ಇದನ್ನು ಅರಿತ ಮಗುವಿನ ಪೋಷಕರು, ಕೊಪ್ಪಳದ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ.ಮಗುವನ್ನು ಪರೀಕ್ಷಿಸಿದ ವೈದ್ಯರು, ಮಗುವಿನ ಗಂಟಲಿನಲ್ಲಿ ಡಬ್ಬಿ ಸಿಲುಕಿಕೊಂಡಿದೆ. ಹೀಗಾಗಿ ಉಸಿರಾಟಕ್ಕೆ ತೊಂದರೆಯಾಗಿ ಅಪಾಯದಲ್ಲಿದೆ ಎಂದು ತಿಳಿಸಿದ್ದಾರೆ. ಕೂಡಲೇ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಹೇಳಿದ್ದಾರೆ. ಪೋಷಕರ ಅನುಮತಿಯಂತೆ ಕೂಡಲೇ ಜಿಲ್ಲಾಸ್ಪತ್ರೆಯ ಇಎನ್‍ಟಿ ವಿಭಾಗದ ವೈದ್ಯರಾದ ಡಾ. ಮಲ್ಲಿಕಾರ್ಜುನ ಅವರು ಮಗುವಿನ ಗಂಟಲಲ್ಲಿ ಸಿಲುಕಿದ್ದ ಡಬ್ಬಿಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ಮೂಲಕ ಭಾರೀ ಅಪಾಯದಿಂದ ಪುಟ್ಟ ಕಂದಮ್ಮನನ್ನು ಪಾರು ಮಾಡಿದ್ದಾರೆ.