ಮಂಗಳೂರು, ಜೂನ್ 30; ಒಂದು ಕೋಟಿ ರೂಪಾಯಿ ಮೌಲ್ಯದ ಹೈಡ್ರೋವೀಡ್ ಗಾಂಜಾ ಸಾಗಿಸುತ್ತಿದ್ದ ಮಹಿಳಾ ವೈದ್ಯೆಯನ್ನು ಮಂಗಳೂರು ಹೊರವಲಯದ ದೇರಳಕಟ್ಟೆ ಬಳಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಾಂಞಗಾಡ್‌ನ ಹರಿಮಲ ಆಸ್ಪತ್ರೆ ವೈದ್ಯೆ ಮಿನು ರಶ್ಮಿ ಬಂಧಿತ ಮಹಿಳೆ. ವೈದ್ಯೆಯ ಜೊತೆಗಿದ್ದ ಇನ್ನೊರ್ವ ಆರೋಪಿ ಕಾಸರಗೋಡಿನ ಅಜ್ಮಲ್‌ನನ್ನೂ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ, ವಿದೇಶದಲ್ಲಿರುವ ಡಾ. ನದೀರ್ ಸೂಚನೆಯಂತೆ ವೈದ್ಯೆ ಮಿನು ರಶ್ಮಿ, ಕಾಂಞಗಾಡ್‌ನಿಂದ ಗಾಂಜಾ ತೆಗೆದುಕೊಂಡು ಬಂದು ದೇರಳಕಟ್ಟೆಯಲ್ಲಿ ನದೀರ್ ಸ್ನೇಹಿತನಿಗೆ ನೀಡಲು ಆಗಮಿಸಿದ್ದರು. ಈ ವೇಳೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
1 ಕೆಜಿ 236 ಗ್ರಾಂ ತೂಕದ ಹೈಡ್ರೋವೀಡ್ ಗಾಂಜಾ ಇದಾಗಿದ್ದು, ಇದರ ಮೌಲ್ಯ ಸುಮಾರು 30 ಲಕ್ಷದಿಂದ 1 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಿಸಿಬಿ ಪೊಲೀಸರು ಬಂಧಿತ ಆರೋಪಿಗಳ ವಿಚಾರಣೆಯನ್ನು ಮುಂದುವರೆಸಿದ್ದಾರೆ.
ಬಂಧಿತ ವೈದ್ಯೆ ತಮಿಳುನಾಡು ಮೂಲದವರು. ಮಂಗಳೂರಿನ ಸುರತ್ಕಲ್‌ನಲ್ಲಿ ವಾಸವಾಗಿದ್ದರು. ಕೇರಳದಿಂದ ಗಾಂಜಾ ತರಿಸಿಕೊಂಡು ಮಂಗಳೂರಿನ ಉಳ್ಳಾಲ, ಕೋಣಾಜೆ, ಉಪ್ಪಳ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದರು.
ಮಂಗಳೂರಿನ ಇಕಾನಮಿಕ್ ಅಂಡ್ ನಾರ್ಕೋಟಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಹಿಂದೆ ಪ್ರಭಾವಿಗಳ ಕೈವಾಡ ಇರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ.