ಕೊಪ್ಪಳ: ನರೇಗಾ ಯೋಜನೆಯಡಿ ರಾಜ್ಯಕ್ಕೆ ಬರಬೇಕಿರುವ 600 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲು ಒಂದು ತಿಂಗಳ ಹಿಂದೆಯೇ ಮನವಿ ಮಾಡಿಕೊಂಡಿದ್ದು, ಇಲ್ಲಿಯವರೆಗೂ ನಯಾಪೈಸೆ ಕೊಟ್ಟಿಲ್ಲ.
ಬರ ಪರಿಹಾರವನ್ನೂ ನೀಡಿಲ್ಲ. ರಾಜ್ಯದ ಬಗ್ಗೆ ಅವರು ಮಲತಾಯಿ ಧೋರಣೆ ತಾಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರಕಾರವನ್ನು ದೂರಿದ್ದಾರೆ.
ತಾಲೂಕಿನ ಬಸಾಪೂರ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಶಾಸಕ, ಸಚಿವರನ್ನೇ ಭೇಟಿ ಆಗಲು ಸಮಯ ನೀಡುತ್ತಿಲ್ಲ. ಇನ್ನು ನಮ್ಮ ಭೇಟಿಗೆ ಏನು ಅವಕಾಶ ಕೊಡುತ್ತಾರೆ? ರಾಜ್ಯ ಬಿಜೆಪಿಯವರು ಮೊದಲು ಕೇಂದ್ರ ಸರ್ಕಾರದದಿಂದ ಹಣ ಬಿಡುಗಡೆ ಮಾಡಿಸಲಿ” ಎಂದರು.
ಮುಂದುವರೆದು ಎರಡೂವರೆ ವರ್ಷದ ಬಳಿಕ ಸಿಎಂ ಬದಲಾಗುತ್ತಾರಾ? ಎಂಬ ವಿಚಾರಕ್ಕೆ ಸರಿಯಾಗಿ ಪ್ರತಿಕ್ರಿಯಿಸದ ಸಿಎಂ, “ನಮ್ಮದೇ ಸರಕಾರ ಐದು ವರ್ಷ ಇರಲಿದೆ. ಏಕೆಂದರೆ ಹಿಂದಿನ ಬಿಜೆಪಿ ಸರಕಾರ ರಾಜ್ಯವನ್ನು ದಿವಾಳಿ ಎಬ್ಬಿಸಿತ್ತು. ಇದರ ನಡುವೆಯೇ ಅಧಿಕಾರಕ್ಕೆ ಬಂದ ತಕ್ಷಣ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ನಮ್ಮ ಯಾವ ಶಾಸಕರು ಅಸಮಾಧಾನಗೊಂಡಿಲ್ಲ” ಎಂದು ವಿಷಯಾಂತರ ಮಾಡಿದರು.
ಬಿಜೆಪಿ ಸಂಸದರು ಬರ ಪರಿಹಾರಕ್ಕೆ ಕೇಂದ್ರವನ್ನು ಆಗ್ರಹಿಸಿ: “ಬರ ತಾಂಡವಾಡುತ್ತಿರುವಾಗ ಜನರಿಗೆ ಅನುಕೂಲ ಕಲ್ಪಿಸುವ ವಿಚಾರದಲ್ಲಿ ಕೇಂದ್ರ ಸರಕಾರ ರಾಜಕೀಯ ಮಾಡುತ್ತಿದೆ. ತಾವು ತಮ್ಮ ಪಾಲಿನ ಅನುದಾನ ನೀಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬಿಜೆಪಿ ಬರ ಅಧ್ಯಯನ ಬಿಟ್ಟು, ಕೇಂದ್ರ ಸರಕಾರದಿಂದ ಬರ ಪರಿಹಾರ ಕೊಡಿಸುವ ಕೆಲಸ ಮಾಡಬೇಕು. ರಾಜ್ಯದಲ್ಲಿ 25 ಜನ ಸಂಸದರಿದ್ದು, ಇವರೆಲ್ಲ ಏನು ಮಾಡುತ್ತಿದ್ದಾರೆ?” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.