: ಇದೇ 7ರಿಂದ ಆರಂಭವಾಗುವ ನಾಡಹಬ್ಬ ಮೈಸೂರು ದಸರಾ ಉದ್ಘಾಟಿಸುವಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಅಧಿಕೃತವಾಗಿ ಆಹ್ವಾನ ನೀಡಿದರು.
ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಯವರು, ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಫಲ ತಾಂಬೂಲ ನೀಡಿ ಗೌರವಿಸಿದರು. ಶಿವನಿ ಮರದಲ್ಲಿ ಕೆತ್ತನೆ ಮಾಡಿರುವ ಮೈಸೂರು ಅಂಬಾರಿಯ ಕಲಾಕೃತಿಯ ಸ್ಮರಣಿಕೆ ನೀಡಿ ದಸರಾ ಉದ್ಘಾಟನೆಗೆ ಆಹ್ವಾನಿಸಿದರು.
‘ರಾಜ್ಯ ರಾಜಕೀಯದಲ್ಲಿ ಮುತ್ಸದ್ದಿ ನಾಯಕರಾಗಿ ಬೆಳೆದಿರುವ ಎಸ್.ಎಂ. ಕೃಷ್ಣ ಅವರನ್ನು ಈ ಬಾರಿಯ ದಸರಾ ಉದ್ಘಾಟಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದೆವು. ನಾಡಹಬ್ಬ ಉದ್ಘಾಟಿಸುವಂತೆ ಅಧಿಕೃತವಾಗಿ ಆಹ್ವಾನ ನೀಡಿದ್ದೇವೆ’ ಎಂದರು.
ಆಹ್ವಾನ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಕೃಷ್ಣ, ‘ಮೈಸೂರು ನಗರ ಮತ್ತು ಅಲ್ಲಿನ ರಾಮಕೃಷ್ಣ ಆಶ್ರಮ ನನ್ನ ವ್ಯಕ್ತಿತ್ವದ ಮೇಲೆ ಬಹಳಷ್ಟು ಪ್ರಭಾವ ಬೀರಿವೆ. ಶಾಲೆ, ಕಾಲೇಜು ದಿನಗಳನ್ನು ಮೈಸೂರಿನಲ್ಲಿ ಕಳೆದಿದ್ದೆ. ಈಗ ದಸರಾ ಉದ್ಘಾಟಿಸುವ ಸುಯೋಗ ಸಿಕ್ಕಿದೆ’ ಎಂದು ಹೇಳಿದರು.
ಕಂದಾಯ ಸಚಿವ ಆರ್. ಅಶೋಕ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಮೈಸೂರು ಮಹಾನಗರ ಪಾಲಿಕೆ ಮೇಯರ್ ಸುನಂದಾ ಫಾಲನೇತ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ರಾಜೀವ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಬಿಜೆಪಿ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಶ್ರೀವಾತ್ಸವ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಸಿ.ಪಿ. ಉಮೇಶ್ ಇದ್ದರು.
Laxmi News 24×7