ವಿಶ್ವಸಂಸ್ಥೆ, ಮೇ 7-ಡೆಡ್ಲಿ ಕೊರೊನಾ ವೈರಸ್ ಹಾವಳಿ ಕುರಿತು ವಿಶ್ವ ಸಂಸ್ಥೆ ನೀಡಿರುವ ಹೊಸ ಅಂಕಿಅಂಶವೊಂದು ಬೆಚ್ಚಿಬೀಳಿಸುವಂತಿದೆ. ಏಪ್ರಿಲ್ ತಿಂಗಳಲ್ಲಿ ಪ್ರತಿದಿನ ವಿಶ್ವದಲ್ಲಿ ಸರಾಸರಿ 80,000 ಮಂದಿಗೆ ಕೋವಿಡ್-19 ವೈರಸ್ ಸೋಂಕು ತಗುಲಿರುವುದು ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಡಬ್ಲ್ಯುಎಚ್‍ಒ ಮುಖ್ಯಸ್ಥ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸೂಸ್, ಭಾರತ, ಇಂಡೋನೆಷ್ಯಾ ಸೇರಿದಂತೆ ದಕ್ಷಿಣ ಏಷ್ಯಾದ ಕೆಲವು ದೇಶಗಳಲ್ಲಿ ಸೋಂಕು ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.
ಯೂರೋಪ್‍ನ ಅನೇಕ ದೇಶಗಳಲ್ಲಿ ಸೋಂಕು ವ್ಯಾಪಕವಾಗಿದ್ದರೂ. ಇದೇ ಖಂಡದ ಪಶ್ಚಿಮ ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ರೋಗಗಳ ಪ್ರಕರಣ ಕಡಿಮೆಯಾಗಿರುವುದು ಕಂಡುಬಂದಿದೆ ಎಂದರು.
ಕೆಲವು ದೇಶಗಳಲ್ಲಿ ಲಾಕ್‍ಡೌನ್‍ನಲ್ಲಿ ತುಂಬಾ ಸಡಿಲಿಕೆ ಮಾಡಿ, ಕೆಲವು ನಿರ್ಬಂಧಗಳನ್ನು ತೆರವುಗೊಳಿಸಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಇದರಿಂದ ಸೋಂಕು ಮತ್ತು ಸಾವು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.