ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಅಥವಾ ಕೋವಿಡ್ 19 ಹರಡುವುದನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿತ್ತು. ಆದರೆ ಇದೀಗ ಈ ಲಾಕ್ ಡೌನ್ ಅನ್ನು ಸ್ವಲ್ಪ ಮಟ್ಟಿನಲ್ಲಿ ಸಡಿಲಿಕೆ ಮಾಡಲಾಗಿದ್ದು, ಮದ್ಯದಂಗಡಿಗಳನ್ನು ಆರಂಭಿಸಲಾಗಿದೆ. ಹೀಗಾಗಿ ಜನ ಮುಗಿಬಿದ್ದು ಮದ್ಯ ಖರೀದಿಸುತ್ತಿದ್ದಾರೆ. ಅಂತೆಯೇ ದೇಶದ ರಾಜಧಾನಿ ದೆಹಲಿಯಲ್ಲಿ ಕ್ಯೂ ನಿಂತ ಮದ್ಯಪ್ರಿಯರ ಮೇಲೆ ವ್ಯಕ್ತಿಯೊಬ್ಬ ಹೂಮಳೆ ಸುರಿಸಿದ್ದಾರೆ.
ಹೌದು. ಮದ್ಯದಂಗಡಿ ನಿನ್ನೆ ಆರಂಭವಾಗಿದ್ದು, ಇಂದು ಕೂಡ ಜನ ಎಣ್ಣೆ ಖರೀದಿಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ಮದ್ಯಕ್ಕಾಗಿ ಚಂದರ್ ನಗರ್ ಪ್ರದೇಶದಲ್ಲಿ ಜನ ಕ್ಯೂನಲ್ಲಿ ನಿಂತಿದ್ದರು. ಈ ವೇಳೆ ವ್ಯಕ್ತಿಯೊಬ್ಬರು ಒಂದು ಪ್ಲಾಸ್ಟಿಕ್ ಕವರಿನಲ್ಲಿ ಹೂ ತುಂಬಿಸಿಕೊಂಡು ಬಂದು ಅದನ್ನು ಕ್ಯೂ ನಿಂತವರ ಮೇಲೆ ಎಸೆದಿದ್ದಾರೆ. ಇದನ್ನು ಅಲ್ಲೇ ಇದ್ದ ಸ್ಥಳೀಯರು ವಿಡಿಯೋ ಮಾಡಿದ್ದಾರೆ.
”ನೀವು ನಮ್ಮ ದೇಶದ ಅರ್ಥವ್ಯವಸ್ಥೆಯನ್ನು ಸರಿದೂಗಿಸುವವರಾಗಿದ್ದೀರಿ… ನೀವಿಲ್ಲಂದರೆ ಸರ್ಕಾರಕ್ಕೆ ಹಣ ಬರಲ್ಲ. ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ” ಎಂದು ಹೇಳಿದ್ದಾರೆ. ಹೂ ಹಾಕುವಾಗ ವ್ಯಕ್ತಿ ಮಾಸ್ಕ್ ಧರಿಸಿದ್ದರಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದನ್ನು ವಿಡಿಯೋದಲ್ಲಿ ಗಮನಿಸಬಹುದು.
ಇತ್ತ ಸೋಮವಾರ ವಸಂತ್ ವಿಹಾರ್ ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ವೈನ್ ಹಾಗೂ ಬಾರ್ ಗಳಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ಸೇರಿದ್ದಕ್ಕೆ ಮ್ಯಾನೇಜರ್ ಗಳಿಗೆ ಈ ನೋಟಿಸ್ ನೀಡಿದ್ದಾರೆ.
ದೇಶಾದ್ಯಂತ ಸೋಮವಾರ ವೈನ್ ಶಾಪ್ ಗಳು ಬಾಗಿಲು ತೆರೆದಿದ್ದು, ಖರೀದಿ ಮಾಡಲು ಜನ ಮುಗಿ ಬಿದ್ದ ಹಿನ್ನೆಲೆಯಲ್ಲಿ ಮತ್ತೆ ಸರ್ಕಾರ ಬಂದ್ ಮಾಡಿಸದ ಪ್ರಸಂಗವೂ ನಡೆದಿತ್ತು.