ಬೆಂಗಳೂರು,ಜೂ.4- ಕೃಷಿ ಇಲಾಖೆಯ ಎಡವಟ್ಟಿನಿಂದಾಗಿ ರೈತರ ಖಾತೆಗೆ ಹೋಗಬೇಕಾಗಿದ್ದ ಹಣ ಏರ್‍ಟೆಲ್ ಪೇಮೆಂಟ್ ಬ್ಯಾಂಕ್‍ಗೆ ವರ್ಗಾವಣೆಯಾಗಿರುವ ಪ್ರಸಂಗ ನಡೆದಿದೆ. ಪತ್ರಿಕಾಗೋಷ್ಠಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರೇ ಖುದ್ದು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ಏರ್‍ಟೆಲ್ ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಆಧುನಿಕ ತಂತ್ರಜ್ಞನದಲ್ಲಿ ಸ್ವಲ್ಪ ಯಾಮಾರಿದರೂ ಏನೆಲ್ಲ ಎಡವಟ್ಟುಗಳಾಗುತ್ತವೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಏರ್‍ಟೆಲ್ ಕಂಪನಿ ಸಿಮ್ ಮಾರಾಟ ಮಾಡಬೇಕಾದರೆ ಆಧಾರ್ ಸಂಖ್ಯೆ ಪಡೆದುಕೊಳ್ಳುತ್ತದೆ. ಜೊತೆಗೆ ಏರ್‍ಟೆಲ್ ಪೇಮೆಂಟ್ ಬ್ಯಾಂಕ್ ಖಾತೆ ಕೂಡ ಸ್ವಯಂಚಾಲಿತವಾಗಿ ಓಪನ್ ಆಗಿರುತ್ತದೆ.
ರಾಜ್ಯ ಸರ್ಕಾರ ಪ್ರಧಾನಮಂತ್ರಿ ಫಸಲ್ ಭೀಮ ಯೋಜನೆ, ಕೊರೊನಾ ಸಂದರ್ಭದಲ್ಲಿ ರೈತರಿಗೆ ಐದು ಸಾವಿರ ರೂ. ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿರುವ ಪ್ಯಾಕೇಜ್ ಸೇರಿದಂತೆ ಹಲವಾರು ಯೋಜನೆಗಳ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ರೈತರಿಗೆ ತಲುಪಿಸಲು ಕೃಷಿ ಇಲಾಖೆ ಮುಂದಾಗಿದೆ.
ಆದರೆ ಕೃಷಿ ಇಲಾಖೆ ರೈತರಿಂದ ಬ್ಯಾಂಕ್ ಖಾತೆ ವಿವರ ಸೇರಿದಂತೆ ಸಂಪೂರ್ಣ ಮಾಹಿತಿ ಕಲೆ ಹಾಕದೆ ಆಧಾರ್ ಸಂಖ್ಯೆಯೊಂದನ್ನೇ ಇಟ್ಟುಕೊಂಡು ಹಣ ವರ್ಗಾವಣೆ ಮಾಡಲು ಮುಂದಾಗಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಹಾವೇರಿಯಲ್ಲಿ 68 ರೈತರಿಗೆ ಹಣ ವರ್ಗಾವಣೆ ಮಾಡಲಾಗಿದೆ.
ಇದು ರೈತರ ಬ್ಯಾಂಕ್ ಖಾತೆಗಳಿಗೆ ಹೋಗುವ ಬದಲಾಗಿ ಏರ್‍ಟೇಲ್ ಪೇಮೆಂಟ್ ಬ್ಯಾಂಕ್‍ಗೆ ಹೋಗಿದೆ. ಬಹಳಷ್ಟು ರೈತರು ಸ್ಮಾಟ್‍ಪೋನ್ ಹೊಂದಿಲ್ಲದಿದ್ದವರು, ತಾಂತ್ರಿಕತೆ ಗೊತ್ತಿಲ್ಲದವರು ತಮಗೆ ಹಣ ಬಂದಿಲ್ಲ ಎಂದು ದೂರಿದ್ದಾರೆ. ಕೃಷಿ ಅಧಿಕಾರಿಗಳು ವರ್ಗಾವಣೆಯ ಹಣ ಹೋಗಿದ್ದಾದರೂ ಎಲ್ಲಿಗೆ ಎಂದು ಪರಿಶೀಲನೆ ನಡೆಸಿದಾಗ ಏರ್‍ಟೆಲ್ ಪೇಮೆಂಟ್ ಬ್ಯಾಂಕ್‍ನ ಅಸಲಿಯತ್ತು ಬಯಲಾಗಿದೆ.
ಹಣ ರೈತರ ಹೆಸರಿನಲ್ಲಿರುವ ಏರ್‍ಟೇಲ್ ಪೇಮೆಂಟ್ ಆನ್‍ಲೈನ್ ಖಾತೆಗೆ ಹೊಂದಿದೆ. ನಿಯಮಾನುಸಾರ ಅದನ್ನು ಏರ್‍ಟೆಲ್ ಕಂಪನಿ ಬೇರೆ ಖಾತೆಗೆ ವರ್ಗಾವಣೆ ಮಾಡಲು ಕಷ್ಟಸಾಧ್ಯ. ಅದಕ್ಕೆ ರೈತರ ಒಪ್ಪಿಗೆ ಬೇಕು. ಬಹಳಷ್ಟು ಮಂದಿ ರೈತರಿಗೆ ಏರ್‍ಟೆಲ್ ಪೇಮೆಂಟ್ ಬ್ಯಾಂಕ್‍ನಿಂದ ಹಣವನ್ನು ನಗದು ರೂಪದಲ್ಲಿ ತೆಗೆದುಕೊಳ್ಳಲು ಆಗುವುದಿಲ್ಲ. ತಮ್ಮ ಇತರ ಬ್ಯಾಂಕ್‍ಗಳ ಖಾತೆಗೂ ವರ್ಗಾವಣೆ ಮಾಡಿಕೊಳ್ಳುವ ವಿಧಾನ ಗೊತ್ತಿಲ್ಲ. ಹೀಗಾಗಿ ಗೊಂದಲ ಸೃಷ್ಟಿಯಾಗಿದೆ.
10 ಲಕ್ಷ ರೈತರಿಗೆ ಆರ್ಥಿಕ ಸೌಲಭ್ಯ ನೀಡುವ ಗುರಿಯನ್ನು ಸರ್ಕಾರ ನಿರ್ಧರಿಸಿದೆ. ಎಲ್ಲರೂ ರೈತರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಜೊತೆ ಕೂಡಲೇ ಲಿಂಕ್ ಮಾಡಿಸಬೇಕೆಂದು ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ. 68 ಮಂದಿಗೆ ಹಣ ವರ್ಗಾವಣೆ ಮಾಡಿರುವುದರಲ್ಲಿ ಕೃಷಿ ಅಧಿಕಾರಿಗಳ ಲೋಪವಿಲ್ಲ.
ವಿದ್ಯುನ್ಮಾನದ ತಾಂತ್ರಿಕತೆಯಿಂದಾಗಿ ತಪ್ಪಾಗಿದೆ. ಏನೇ ಆದರೂ ಅನುಮತಿ ಇಲ್ಲದೆ ರೈತರಿಗೆ ಸೇರಬೇಕಿದ್ದ ಹಣವನ್ನು ಏರ್‍ಟೇಲ್ ಬ್ಯಾಂಕ್ ತನ್ನ ಬಳಿ ಇಟ್ಟುಕೊಳ್ಳುವುದು ಅಪರಾಧವಾಗಿದೆ. ಈ ಕುರಿತಂತೆ ಏರ್‍ಟೆಲ್ ಕಂಪನಿ ವಿರುದ್ಧ ನೋಟಿಸ್ ಕೊಟ್ಟು ಕಾನೂನು ಕ್ರಮ ಜರುಗಿಸಿದ್ದೇವೆ ಎಂದರು.
ಈಗಾಗಲೇ ವರ್ಗಾವಣೆಯಾಗಿರುವ ಹಣವನ್ನು ಪಡೆಯಲು ರೈತರು ಖುದ್ದಾಗಿ ತಹಸೀಲ್ದಾರ್ ಕಚೇರಿಗೆ ಆಧಾರ್‍ಕಾರ್ಡ್‍ನೊಂದಿಗೆ ಹೋಗಿ ಅಲ್ಲಿಂದ ಪ್ರಮಾಣ ಪತ್ರ ಪಡೆದುಕೊಂಡು ಏರ್‍ಟೆಲ್ ಬ್ಯಾಂಕ್‍ಗೆ ಸಲ್ಲಿಸಿ ತಮ್ಮ ಹಣವನ್ನು ವಾಪಸ್ ಪಡೆದುಕೊಳ್ಳಬಹುದು ಎಂದು ಹೇಳಿದರು.
ತಾಂತ್ರಿಕ ಗೊಂದಲಗಳಿಂದಾಗಿ ಕೊರೊನಾ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಪ್ರಕಟಿಸಿರುವ ಪ್ರತಿ ರೈತರ ಖಾತೆಗೆ 5 ಸಾವಿರ ನೀಡುವ ಪ್ಯಾಕೇಜ್ ಹಣವನ್ನು ಪಾವತಿಸಲು ಎರಡು ದಿನಗಳ ಕಾಲ ತಡೆಯಾಜ್ಞೆ ನೀಡಲಾಗಿದೆ. ಎಲ್ಲ ರೈತರು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದ ಬಳಿಕ ಹಣ ಪಾವತಿಸಲಾಗುವುದು ಎಂದು ತಿಳಿಸಿದರು.
ಪ್ರತಿಷ್ಠಿತ ಬ್ರ್ಯಾಂಡ್‍ಗಳ ಬಿತ್ತನೆ ಬೀಜ, ರಸಗೊಬ್ಬರ, ರಾಸಾಯನಿಕಗಳನ್ನು ಕೆಲವು ಕಂಪನಿಗಳು ನಕಲಿ ಮಾಡಿ ಮಾರಾಟ ಮಾಡುತ್ತಿವೆ. ಕಡಿಮೆ ಬೆಲೆಗೆ ಸಿಗುವ ಇಂತಹ ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ಬಿತ್ತಿ ಬೆಳೆ ಬರದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ.
ಯಾದಗಿರಿಯಲ್ಲಿ ದಾಳಿ ಮಾಡಿದಾಗ ತೆಲಂಗಾಣ ಮೂಲದ ಕಂಪನಿ ನಕಲಿ ಹತ್ತಿ ಬೀಜ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಎರಡು ಕೋಟಿ ರೂ. ಮೊತ್ತದ ಬಿತ್ತನೆ ಬೀಜವನ್ನು ವಶಪಡಿಸಿಕೊಳ್ಳಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ತುರವಿಹಾಳದಲ್ಲೂ ನಕಲಿ ಬಿತ್ತನೆ ಬೀಜವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಕೊರೊನಾ ಸಂದರ್ಭದಲ್ಲಿ ಕೈಗಾರಿಕೆಗಳು ನಷ್ಟದಲ್ಲಿದ್ದು ಮುಚ್ಚಿಹೋಗುತ್ತಿವೆ. ಕೃಷಿ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳು ಮಾತ್ರ ಸ್ಥಿರವಾಗಿ ನಿಂತಿವೆ. ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರಗಳಲ್ಲಿ ಸುಸ್ಥಿರತೆ ಕಾಣಲು ಸಾಧ್ಯ. ರೈತರು ಕೃಷಿಯತ್ತ ಆಸಕ್ತಿ ವಹಿಸಬೇಕು ಎಂದು ಕರೆ ನೀಡಿದರು. ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಮಿಡತೆಗಳು ರಾಜ್ಯವನ್ನು ಪ್ರವೇಶಿಸದೆ ಮಧ್ಯಪ್ರದೇಶದತ್ತ ಹೋಗಿವೆ ಎಂದು ಅವರು ಸ್ಪಷ್ಟಪಡಿಸಿದರು.