ನವದೆಹಲಿ: ದೇಶದಲ್ಲಿ ಡೆಡ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಯಲ್ಲಿ ಗರಿಷ್ಠ 9,304 ಮಂದಿಗೆ ಸೋಂಕು ದೃಢಪಟ್ಟಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದ 9,304 ಮಂದಿಗೆ ಸೋಂಕು ಪತ್ತೆಯಾದರೆ, 260 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 2,16,919ಕ್ಕೆ ಏರಿಕೆಯಾದರೆ, ಕೊರೊನಾಗೆ 6,075 ಮಂದಿ ಬಲಿಯಾಗಿದ್ದಾರೆ. ಈವರೆಗೂ 1,04,107 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 1,06,737 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶದಲ್ಲಿ ಮೇ 30ರಿಂದ ನಿತ್ಯವೂ 8 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದಕ್ಕೂ ಮುನ್ನ ಪ್ರತಿನಿತ್ಯ 7 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಡುತ್ತಿತ್ತು. ಆದರೆ ಈಗ ಸೋಂಕಿತರ ಸಂಖ್ಯೆ ಹಾಗೂ ಮೃತರ ಸಂಖ್ಯೆ ಭಾರೀ ಏರಿಕೆ ಕಾಣುತ್ತಿರುವುದು ದೇಶದ ಜನರ ಆತಂಕಕ್ಕೆ ಕಾರಣವಾಗಿದೆ.