ರಾಯಚೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹೊಸ ಲಾಕ್‍ಡೌನ್ ನಿಂದ ಸಂಪೂರ್ಣ ಸಡಿಲಿಕೆ ಸಿಕ್ಕಿದ್ರೆ ರಾಯಚೂರಿನಲ್ಲಿ ಇಂದು ಸಂಪೂರ್ಣ ಲಾಕ್ ಡೌನ್ ಇದೆ. ಗ್ರೀನ್ ಝೋನ್‍ನಲ್ಲಿದ್ದ ಜಿಲ್ಲೆಯಲ್ಲಿ ಆರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರಿಂದ ಒಂದು ದಿನದ ಮಟ್ಟಿಗೆ ಇಡೀ ನಗರವನ್ನ ಬಂದ್ ಮಾಡಲಾಗುತ್ತಿದೆ. ಅಗತ್ಯ ಸೇವೆ ಹೊರತುಪಡಿಸಿ ಎಲ್ಲವನ್ನೂ ಬಂದ್ ಮಾಡಲಾಗಿದೆ.
ಸರ್ಕಾರಿ ಕಚೇರಿ, ವೈದ್ಯಕೀಯ ಸೇವೆ, ಪೆಟ್ರೋಲ್, ಬ್ಯಾಂಕ್, ಔಷಧಿ ಮಳಿಗೆ ಹೊರತು ಪಡಿಸಿ ಎಲ್ಲವೂ ಒಂದು ದಿನದ ಮಟ್ಟಿಗೆ ಬಂದ್ ಮಾಡುವುದಾಗಿ ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್ ಆದೇಶ ಹೊರಡಿಸಿದ್ದು, ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೂ ಮೇ 31 ರ ನಿಷೇಧಾಜ್ಞೆಯನ್ನೂ ಜಿಲ್ಲೆಯಲ್ಲಿ ಮುಂದುವರಿಸಲಾಗಿದೆ.
ಜೊತೆಗೆ ರಾಜ್ಯಾದ್ಯಂತ ಬಸ್ ಓಡಾಟ ಆರಂಭವಾದರೂ ರಾಯಚೂರಿನಲ್ಲಿ ಪ್ರಯಾಣಿಕರ ಕೊರತೆಯಿಂದ ಬಸ್ ಸಂಚಾರ ನಿಧಾನವಾಗಿದೆ. ರಾಯಚೂರಿನ ಆರು ಡಿಪೋಗಳಿಂದ 100 ಬಸ್ ಓಡಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದ್ರೆ ಪ್ರಯಾಣಿಕರ ಕೊರತೆ ಹಿನ್ನೆಲೆ ಕೇವಲ 20 ಬಸ್‍ಗಳ ಓಡಾಟ ಆರಂಭವಾಗಿದೆ. ಈ ಮೊದಲು ಜಿಲ್ಲೆಯಲ್ಲಿ ಓಡಾಡುತ್ತಿದ್ದ 30 ಬಸ್ ಗಳಿಗೂ ಪ್ರಯಾಣಿಕರ ಕೊರತೆ ಎದುರಾಗಿದೆ. ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣಿಕರು ಬಂದರೆ ಮಾತ್ರ ಹೆಚ್ಚು ಬಸ್ ಬಿಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇಂದು ರಾಯಚೂರು ನಗರ ಸಂಪೂರ್ಣ ಲಾಕ್ ಡೌನ್ ಇರುವ ಕಾರಣದಿಂದಲೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ನಾಳೆಯಿಂದ ಹೆಚ್ಚು ಬಸ್ ಗಳನ್ನು ಬಿಡಲಾಗುತ್ತದೆ ಅಂತ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ