ರಾಮನಗರ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ.
ಅಕ್ರಮ ಸಂಪತ್ತು ಗಳಿಕೆ ಪ್ರಕರಣದ ವಿಚಾರವಾಗಿ ಹಿಂದಿನ ವರ್ಷ ಇಡಿ ಅಧಿಕಾರಿಗಳು ಡಿಕೆಶಿ ಅವರನ್ನು ಬಂಧಿಸಿದ್ದ ಸಂದರ್ಭದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು. ಆ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ – ಪಾಸ್ತಿಗೆ ನಷ್ಟ ಉಂಟಾಗಿತ್ತು. ಸದ್ಯ ನಷ್ಟದ ವಿಚಾರಣೆಗೆ ಸರ್ಕಾರ, ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ನಡೆಸಿದ ನಂತರ ಆದಾಯ ತೆರಿಗೆ ಇಲಾಖೆಯು ಈ ಪ್ರಕರಣವನ್ನು ಇಡಿಗೆ ಹಸ್ತಾಂತರಿಸಿತ್ತು. ಆಗ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಇಡಿ, ಡಿಕೆಶಿ ಅವರನ್ನು ಬಂಧಿಸಿತ್ತು. ಬಂಧನವನ್ನು ಖಂಡಿಸಿ, ಡಿಕೆಶಿ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ರಾಮನಗರ ಸೇರಿದಂತೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಿದ್ದರು.ರಾಮನಗರದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಸುಮಾರು ರೂ. 82 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಗೆ ನಷ್ಟವಾಗಿತ್ತು. ಈ ಕುರಿತು 100ಕ್ಕೂ ಹೆಚ್ಚು ಜನರ ವಿರುದ್ಧ ದೂರು ದಾಖಲಾಗಿತ್ತು. ಸಾರ್ವಜನಿಕ ಆಸ್ತಿಪಾಸ್ತಿಗೆ ಆದ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲಾಗುವುದು ಎಂದು ರಾಜ್ಯ ಸರಕಾರ ತಿಳಿಸಿತ್ತು.
ಹೀಗಾಗಿ ಸದ್ಯ ಸರ್ಕಾರ, ವಿಚಾರಣೆಗೆ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿದೆ. ಇವರಿಗಾಗಿ ರಾಮನಗರದಲ್ಲಿಯೇ ಕಚೇರಿ ಸಿದ್ಧಪಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನ್ಯಾಯಾಧೀಶರು, ನಷ್ಟವಾದ ಆಸ್ತಿಯ ವಿವರ ಕಲೆ ಹಾಕಿ, ಪ್ರಕರಣ ವಿಚಾರಣೆ ನಡೆಸಲಿದ್ದಾರೆ.
ಪ್ರತಿಭಟನೆಯ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ ಗಳಿಗೆ ಬೆಂಕಿ ಹಂಚಲಾಗಿತ್ತು. ಕಾರು, ಬೈಕ್ ಗಳು ಜಖಂ ಆಗಿದ್ದವು. ರಸ್ತೆಯಲ್ಲಿ ಉಗ್ರ ಪ್ರತಿಭಟನೆ ನಡೆಸಿದ ಪರಿಣಾಮ ಸಂಚಾರ ಅವ್ಯವಸ್ಥಿತಗೊಂಡಿತ್ತು. ಹಲವು ಕಚೇರಿಗಳನ್ನು ಧ್ವಂಸಗೊಳಿಸಲಾಗಿತ್ತು. ಬಿಜೆಪಿ ಕಚೇರಿಯಲ್ಲಿನ ವಸ್ತುಗಳು ಜಖಂ ಆಗಿದ್ದವು. ಈಗಾಗಲೇ ಈ ನಷ್ಟದ ಕುರಿತು ಜಿಲ್ಲಾಡಳಿತ ವರದಿ ಸಲ್ಲಿಸಿದ್ದು, ರೂ. 82 ಕೋಟಿಯಷ್ಟು ನಷ್ಟವಾಗಿದೆ ಎಂದು ಹೇಳಿದೆ.
ಅಷ್ಟೇ ಅಲ್ಲದೇ, ಪ್ರತಿಭಟನೆಯ ಸಂದರ್ಭದಲ್ಲಿ ಜನರ ಆಸ್ತಿ – ಪಾಸ್ತಿಗೆ ನಷ್ಟವಾಗಿದ್ದರೆ, ಅವರು ನೇರವಾಗಿ ನ್ಯಾಯಾಧೀಶರನ್ನು ಭೇಟಿಯಾಗಿ ದೂರು ನೀಡಬಹುದು. ಸ್ವಂತ ಆಸ್ತಿ ಸೇರಿದಂತೆ ಸಾರ್ವಜನಿಕ ಆಸ್ತಿ ಹಾನಿಯಾದ ಕುರಿತು ಮಾಹಿತಿ ಇದ್ದರೂ ತಿಳಿಸಬಹುದು.