ನಾಶಿಕ್: ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ದೇವಲಾಲಿಯಲ್ಲಿರುವ ರಕ್ಷಣಾ ವಸತಿ ಸಮುಚ್ಚಯ, ಸೈನಿಕ ತರಬೇತಿ ಶಾಲೆ ಮುಂತಾದ ಸೂಕ್ಷ್ಮ ಪ್ರದೇಶಗಳ ಫೋಟೋಗಳನ್ನು ಪಾಕಿಸ್ತಾನದ ವಾಟ್ಸ್ಆಯಪ್ ಗ್ರೂಪಿಗೆ ರವಾನಿಸಿದಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ 21 ವರ್ಷದವನಾಗಿದ್ದು ಸಂಜೀವ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಶುಕ್ರವಾರ ಸೇನಾ ಪ್ರದೇಶದೊಳಗೆ ಫೋಟೋಗ್ರಫಿ, ವಿಡಿಯೋಗ್ರಫಿ ನಿಷೇಧಿತ ಪ್ರದೇಶಕ್ಕೆ ತೆರಳಿ ತನ್ನ ಮೊಬೈಲ್ ಮೂಲಕ ಫೋಟೋ ಕ್ಲಿಕ್ಕಿಸಿದ್ದ, ಅಲ್ಲದೆ ವಿಡಿಯೋಗಳನ್ನೂ ಮಾಡಿದ್ದ. ಇದೇ ವೇಳೆ ಅಲ್ಲಿದ್ದ ಸೈನಿಕರು ಈತನ ಚಲನವಲನ ಗಮನಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ ವೇಳೆ, ಮೊಬೈಲ್ನಲ್ಲಿ ಕ್ಲಿಕ್ಕಿಸಿದ್ದ ಫೋಟೋ, ವಿಡಿಯೋಗಳನ್ನು ಪಾಕಿಸ್ತಾನದ ವಾಟ್ಸ್ಆಯಪ್ ಗ್ರೂಪ್ನಲ್ಲಿ ಶೇರ್ ಮಾಡಿರುವುದು ದೃಢಪಟ್ಟಿದೆ.
ಶನಿವಾರ ಸಂಜೆ ಈತನನ್ನು ದೇವಲಾಲಿ ಕ್ಯಾಂಪ್ ಪೊಲೀಸ್ ವಶಕ್ಕೆ ಸೇನೆ ಒಪ್ಪಿಸಿದೆ. ಸೇನಾಧಿಕಾರಿ ನೀಡಿದ ದೂರಿನಂತೆ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಸಂಜೀವ್ ಕುಮಾರ್ ಬಿಹಾರದ ಗೋಪಾಲಗಂಜ್ ಜಿಲ್ಲೆಯವನು. ಸೇನಾ ಪ್ರದೇಶದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ದೇವಲಾಲಿ ಕ್ಯಾಂಪ್ ರೈಲ್ವೆ ನಿಲ್ದಾಣದ ಸಮೀಪ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ