ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ತಂದೆ- ತಾಯಿ ಸೇರಿ ಕುಟುಂಬದ ನಾಲ್ವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ಸೌರವ್ ಗಂಗೂಲಿ ಅವರ ತಂದೆ-ತಾಯಿ ಸಹೋದರ ಮತ್ತು ಅವರ ಪತ್ನಿಗೆ ಸೋಂಕು ಪತ್ತೆಯಾಗಿದೆ. ಗಂಗೂಲಿ ಸಹೋದರ, ಅವರ ಪತ್ನಿ ಹಾಗೂ ಗಂಗೂಲಿ ಪೋಷಕರಿಗೆ ಒಂದೇ ರೀತಿಯ ಅನಾರೋಗ್ಯ ಕಾಣಿಸಿಕೊಂಡಿತ್ತು. ಆದರೆ ಅವರ್ಯಾರೂ ಬೆಹಾಲಾದಲ್ಲಿರುವ ಗಂಗೂಲಿ ಅವರ ಮನೆಯಲ್ಲಿರಲಿಲ್ಲ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಲಾಗಿದ್ದು, ವರದಿ ಬಂದ ಬಳಿಕ ಅವನ್ನು ಆಸ್ಪತ್ರೆಯಲ್ಲೇ ಇರಿಸಿಕೊಳ್ಳುವುದಾ ಅಥವಾ ಮನೆಗೆ ಕಳುಹಿಸುವುದಾ ಎನ್ನುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಆರಂಭಿಸಿದ ವೇಳೆಯಲ್ಲಿ ಗಂಗೂಲಿ ಕುಟುಂಬ ಬಡವರು, ಹಿಂದುಳಿದವ ವರ್ಗ, ವಲಸೆ ಕಾರ್ಮಿಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. ಇಸ್ಕಾನ್‌ನಲ್ಲಿ ನಿತ್ಯ 10 ಸಾವಿರ ಮಂದಿಗೆ ಆಹಾರ ಒದಗಿಸಲು ಧನ ಸಹಾಯ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿರುವ ಬೇಲೂರು ಮಠಕ್ಕೆ 2 ಸಾವಿರ ಕೆಜಿ ಅಕ್ಕಿಯನ್ನು ನೀಡಿದ್ದಾರೆ.